ಸುಳ್ಯ, ಜೂ 01 (Daijiworld News/SM): ದ.ಕ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ವಿಶೇಷತೆ ಇದ್ದು, ಇದು ತನ್ನ ನೂತನ ಪ್ರಯೋಗಶೀಲತೆಯಿಂದ ರಾಜ್ಯದಲ್ಲಿಯೇ ಮಾದರಿ ಸಹಕಾರಿ ಬ್ಯಾಂಕ್ಗಳಾಗಿ ಮುನ್ನಡೆಯುತ್ತಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಸುಳ್ಯದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕ್ರೀಡಾಗಂಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಕಾರಿ ಕೇತ್ರದಲ್ಲಿ ಸಾಧಕರ ನಿರ್ಮಾಣ ಆಗಿದೆ. ಅರಂತೋಡು-ತೊಡಿಕಾನ ವ್ಯವಸಾಯ ಸಹಕಾರಿ ಬ್ಯಾಂಕ್ ತನ್ನಲ್ಲಿ ಎಲ್ಲಾ ಆಧುನಿಕ ಸೌಲಭ್ಯ ಅಳವಡಿಸಿಕೊಂಡಿದ್ದು ಇದು ರೈತರಿಗೆ ಸಹಕಾರಿಯಾಗಿದೆ ಎಂದರು. ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ರೈತರಿಗಾಗಿ ಕೃಷಿ ಸಮ್ಮಾನ್ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಇದು ರೈತರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಅಲ್ಲಿ ಇನ್ನಷ್ಟು ಉತ್ತಮ ಸೇವೆ ನಿರೀಕ್ಷೆ ಮಾಡಲು ಸಾಧ್ಯ. ಈ ಹಿನ್ನಲೆಯಲ್ಲಿ ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದತ್ತು ತೆಗೆದುಕೊಂಡು ಉತ್ತಮ ಸೇವೆ ನೀಡಿ. ಇದಕ್ಕೆ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು.