ಸುಳ್ಯ,ಅ. 06(DaijiworldNews/TA): ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಉಪನ್ಯಾಸಕರ ಸಮಸ್ಯೆ ಹಾಗೂ ಇತರ ಮೂಲಭೂತ ಸೌಕರ್ಯದ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಎ.ಬಿ.ವಿ. ಪಿ. ನಗರಾಧ್ಯಕ್ಷ ಕುಲದೀಪ್ ಪೆಲತಡ್ಕ ಹಾಗೂ ತಾಲೂಕು ಎ.ಬಿ.ವಿ.ಪಿ. ಸಂಚಾಲಕ ನಂದನ್ ಐವರ್ನಾಡು ಪ್ರತಿಭಟನೆಯ ಉದ್ದೇಶ ವಿವರಿಸಿದರು. ಬಳಿಕ ತಹಶೀಲ್ದಾರ್ ಅರವಿಂದರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿನ 460ಕ್ಕೂ ಹೆಚ್ಚಿನ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ವ್ಯಾಪಕ ಕೊರತೆ ಇರುವುದು.
ಇದರ ಪರಿಣಾಮ ವಿದ್ಯಾರ್ಥಿಗಳಿಗೆ ಸಮರ್ಪಕ ತರಗತಿ ನಡೆಯದಿರುವುದು ಕಳೆದ ಹಲವಾರು ವರ್ಷಗಳಿಂದ ಇರುವ ಗಂಭೀರ ಸಮಸ್ಯೆಯಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ ಕೂಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತರಗತಿಗಳು ಶುರುವಾಗಿ 50 ದಿನಗಳು ಕಳೆದ ನಂತರ ನೇಮಕಾತಿ ಮಾಡಿರುವುದು ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿದೆ.
ರಾಜ್ಯದ ವಿದ್ಯಾರ್ಥಿಗಳ ಸಮಯ ಹಾಗೂ ತರಗತಿಗಳ ನಷ್ಟಕ್ಕೆ ಹೊಣೆ ಯಾರು? ಆದ್ದರಿಂದ ಸರ್ಕಾರ ಕಾಯಂ ಉಪನ್ಯಾನಕರ ನೇಮಕಾತಿಗೆ ಆದ್ಯತೆ ನೀಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಎಬಿವಿಪಿ ಅಧ್ಯಕ್ಷ ಪುನೀತ್ ಹುಲಿಮನೆ, ಉಪಾಧ್ಯಕ್ಷ ಜಶ್ವಂತ್ ಮೊದಲಾದವರಿದ್ದರು.