ಮಂಗಳೂರು, ಅ.06(DaijiworldNews/AA): ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಇಂದು ಕೂಳೂರು ಸೇತುವೆ ಮೇಲೆ ಪತ್ತೆಯಾಗಿದ್ದು, ಅವರು ಕಾಣೆಯಾಗಿದ್ದಾರೆ.
ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಅಗ್ನಿಶಾಮಕ ಹಾಗೂ ಈಜು ತಜ್ಞರು ನದಿಯಲ್ಲಿ ಮಮ್ತಾಜ್ ಅಲಿ ಅವರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.
ನಾಪತ್ತೆಯಾಗಿರುವ ಮಮ್ತಾಜ್ ಅಲಿ ಅವರು ತನ್ನ ಮಗಳಿಗೆ ವಾಟ್ಸಪ್ನಲ್ಲಿ ಇನ್ನು ನಾನು ಹಿಂತಿರುಗಿ ಬರುವುದಿಲ್ಲ ಎಂದು ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮಮ್ತಾಜ್ ಅಲಿ ಅವರು ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಯ ಚೇರ್ಮನ್ ಆಗಿದ್ದು, ಸ್ಥಳೀಯ ಜಮಾತ್ ನ ಪ್ರಮುಖರಾಗಿದ್ದಾರೆ. ಮಾಜಿ ಶಾಸಕ ಮೊಯಿದೀನ್ ಬಾವಾ ಹಾಗೂ ಕುಟುಂಬಸ್ಥರು ಘಟನಾ ಸ್ಥಳದಲ್ಲಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇನ್ನು ಈ ಘಟನೆಯ ಕುರಿತು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪ್ರತಿಕ್ರಿಯೆ ನೀಡಿದ್ದು, ಇಂದು ಮುಂಜಾನೆ ನಮಗೆ ಮಾಹಿತಿ ಬಂದಿದ್ದು, ಕುಳೂರು ಸೇತುವೆ ಬಳಿ ಉದ್ಯಮಿ ಮುಮ್ತಾಜ್ ಅಲಿ ಅವರ ಕಾರು ಪತ್ತೆಯಾಗಿದೆ. ಅವರು ಸೇತುವೆಯಿಂದ ಹಾರಿರಬಹುದು. ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಂತೆ, 3 ಗಂಟೆ ಸುಮಾರಿಗೆ, ಅವರು ಮನೆಯಿಂದ ಹೊರಟು 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಬಂದಿರಬಹುದು ಎಂದು ಅವರ ಪುತ್ರಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂದರು ಕಾವಲು ಪಡೆ ತಂಡಗಳು ನದಿಯಲ್ಲಿ ಶೋಧ ನಡೆಸುತ್ತಿವೆ. ಅವರು ನದಿಗೆ ಹಾರಿದ್ದಾರೆಯೇ ಅಥವಾ ಬೇರೆಡೆಗೆ ಹೋಗಿದ್ದಾರೆಯೇ, ಏನು ಘಟನೆ ನಡೆಯುತ್ತಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.