ಮಂಗಳೂರು, ಅ.06(DaijiworldNews/AA): ಮೂಲ್ಕಿ-ಮೂಡುಬಿದಿರೆ ನಡುವೆ ಸಂಚರಿಸುವ ಖಾಸಗಿ ಬಸ್ಸೊಂದಕ್ಕೆ 'ಇಸ್ರೇಲ್ ಟ್ರಾವೆಲ್ಸ್' ಎಂದು ಹೆಸರಿಟ್ಟಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆ ಬಸ್ಸಿನ ಹೆಸರನ್ನು 'ಜೆರುಸಲೇಂ ಟ್ರಾವೆಲ್ಸ್' ಎಂದು ಬದಲಾವಣೆ ಮಾಡಲಾಗಿದೆ.
ಇಸ್ರೇಲ್ನಲ್ಲಿ ಸುಮಾರು 12 ವರ್ಷಗಳಿಂದ ಉದ್ಯೋಗದಲ್ಲಿರುವ ಮೂಲತಃ ಕಟೀಲಿನವರಾದ ಲೆಸ್ಟರ್ ಕಟೀಲು ಎಂಬುವವರು ಮಂಗಳೂರಿನಲ್ಲಿ ಬಸ್ ಖರೀದಿ ಮಾಡಿ ಅದಕ್ಕೆ 'ಇಸ್ರೇಲ್ ಟ್ರಾವೆಲ್ಸ್' ಎಂದು ಹೆಸರಿಟ್ಟಿದ್ದರು. ಬಸ್ನ ವ್ಯವಹಾರವನ್ನು ಅವರ ಕುಟುಂಬಸ್ಥರು ನಿಭಾಯಿಸುತ್ತಿದ್ದರು. ಇನ್ನು ಇತ್ತೀಚೆಗೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಉಲ್ಬಣವಾಗಿದ್ದು, ಹೀಗಾಗಿ ಕೆಲವರು 'ಇಸ್ರೇಲ್ ಟ್ರಾವೆಲ್ಸ್' ಹೆಸರಿಟ್ಟಿದ್ದಕ್ಕೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣಗಳಲ್ಲೂ ವಿರೋಧಿಸಿದ್ದರು.
ಇನ್ನು ಈ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ಇದರಿಂದಾಗಿ ಮುಂದೆ ದ್ವೇಷ ಹರಡಬಾರದೆಂಬ ಕಾರಣಕ್ಕೆ ಬಸ್ನ ಮಾಲಕರಿಗೆ ಹೆಸರು ಬದಲಾಯಿಸುವಂತೆ ಸುಚಿಸಿದ್ದಾರೆ. ಬಳಿಕ ಬಸ್ ಮಾಲಕರಾದ ಲೆಸ್ಟರ್ ಅವರು ಬಸ್ ಹೆಸರನ್ನು 'ಜೆರುಸಲೇಂ ಟ್ರಾವೆಲ್ಸ್' ಎಂದು ಬದಲಾಯಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಬಸ್ ಮಾಲಕ ಲೆಸ್ಟರ್ ಅವರು, ಇಸ್ರೇಲ್ನಲ್ಲಿ ಕೆಲಸ ಮಾಡಿದ ಹಾಗೂ ಆ ದೇಶದ ವ್ಯವಸ್ಥೆಯನ್ನು ನೋಡಿ ಅಭಿಮಾನದಿಂದ ಬಸ್ಸಿಗೆ ಇಸ್ರೇಲ್ ಹೆಸರಿಟ್ಟಿದ್ದೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಬೇಸರವಾಗಿ ಈಗ ಹೆಸರು ಬದಲಿಸಿದ್ದೇನೆ. ಜೆರುಸಲೇಂ ಪವಿತ್ರ ಭೂಮಿ. ಅದೂ ಇಸ್ರೇಲ್ನಲ್ಲಿದೆ' ಎಂದು ತಿಳಿಸಿದ್ದಾರೆ.