ಕಾಸರಗೋಡು, (Daijiworld News/SM): ಪೆರ್ಲ ದೇವಲೋಕ ದಂಪತಿ ಕೊಲೆ ಪ್ರಕರಣದ ಆರೋಪಿ ಶಿವಮೊಗ್ಗ ಸಾಗರದ ಇಮಾಂ ಹುಸೈನ್(55) ನನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ಕೋರ್ಟ್ ವಿಧಿಸಿದ್ದ ಅವಳಿ ಜೀವಾವಧಿ ಶಿಕ್ಷೆ ಮತ್ತು ಒಂದೂವರೆ ಲಕ್ಷ ರೂಪಾಯಿ ದಂಡ ರದ್ದುಗೊಳಿಸಿ ಹೈಕೋರ್ಟಿನ ವಿಭಾಗೀಯ ಪೀಠ ತೀರ್ಪು ನೀಡಿದೆ.
ಆರೋಪಿಯ ವಿರುದ್ಧ ಆರೋಪಗಳನ್ನು ಸಾಬಿತುಪಡಿಸಲು ತನಿಖಾ ತಂಡ ಸಲ್ಲಿಸಿರುವ ಪುರಾವೆಗಳು ಸಮರ್ಥವಾಗಿಲ್ಲ. ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಮಾತ್ರ ಆರೋಪಿಗೆ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕೊಲೆಯನ್ನು ಸಾಬೀತುಪಡಿಸುವ ಬಲವಾದ ಪುರಾವೆಗಳಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
1993ರ ಅಕ್ಟೋಬರ್ 9ರಂದು ರಾತ್ರಿ ಪೆರ್ಲ ದೇವಲೋಕದ ಶ್ರೀಕೃಷ್ಣ ಭಟ್(45) ಮತ್ತು ಅವರ ಪತ್ನಿ ಶ್ರೀಮತಿ(35) ಅವರನ್ನು ಕೊಲೆಗೈಯ್ಯಲಾಗಿತ್ತು. ನಿಧಿ ಇದೆ ಎಂದು ಹೇಳಿ ಅವರ ಮನೆಯ ಹಿತ್ತಲಿನಲ್ಲಿ ತೋಡಲಾದ ಹೊಂಡದಲ್ಲಿ ಮೊದಲು ಶ್ರೀಕೃಷ್ಣ ಭಟ್ ತಲೆಗೆ ಹೊಡೆದು ಬರ್ಬರವಾಗಿ ಕೊಲೆಗೈದ ಬಳಿಕ ಮಣ್ಣು ಮುಚ್ಚಲಾಗಿತ್ತು. ನಂತರ ಶ್ರೀಮತಿಯವರನ್ನು ಮನೆಯೊಳಗೆ ಇರಿದು ಕೊಲೆಗೈಯ್ಯಲಾಗಿತ್ತು.
ದಂಪತಿ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ಸಾಗರದ ಜನ್ನತ್ಗಲ್ಲಿ ಇಕ್ಕೇರಿ ರಸ್ತೆ ನಿವಾಸಿ ಸಯ್ಯದ್ ಹುಸೈನರ್ ಪುತ್ರ ಮಂತ್ರವಾದಿ ಎಸ್. ಎಚ್.ಇಮಾಂ ಹುಸೈನ್(53) ಆರೋಪಿಯಾಗಿದ್ದು, 19 ವರ್ಷಗಳ ಬಳಿಕ ಈತನನ್ನು ಬಂಧಿಸಲಾಗಿತ್ತು.