ಕಾಸರಗೋಡು, ಅ.05(DaijiworldNews/AA): ಮಂಜೇಶ್ವರ ವಿಧಾನಸಭಾ ಚುನಾವಣಾ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹಾಗೂ ಇತರ ಎಲ್ಲಾ ಆರೋಪಿಗಳನ್ನು ಕಾಸರಗೋಡು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.
2021 ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರವರನ್ನು ಅಪಹರಿಸಿ ಬಂಧನ ದಲ್ಲಿರಿಸಿ ನಾಮಪತ್ರ ಹಿಂಪಡೆಯುವಂತೆ ಬೆದರಿಕೆ ಒಡ್ಡಿದ್ದು, ಮಾತ್ರವಲ್ಲ. ಸ್ಮಾರ್ಟ್ ಫೋನ್ ಹಾಗೂ ಹಣ ನೀಡಿ ಇನ್ನಷ್ಟು ಆಮಿಷ ತೋರಿಸಿದ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು.
2021ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಕೆ. ಸುಂದರರಿಗೆ ಆಮಿಷ ಒಡ್ಡಿ, ನಾಮಪತ್ರ ಹಿಂಪಡೆಯುವಂತೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಫೋನ್ ಜೊತೆಗೆ 2.5 ಲಕ್ಷ ಲಂಚ ನೀಡಲಾಗಿತ್ತು. ಬಳಿಕ ಜಿಲ್ಲಾ ಅಪರಾಧ ವಿಭಾಗವು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಅಪರಾಧ ವಿಭಾಗದ ಡಿವೈಎಸ್ಪಿ ಎ.ಸತೀಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವು ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಸುರೇಂದ್ರನ್ ಅವರಲ್ಲದೆ, ಭಾರತೀಯ ಜನತಾ ಯುವ ಮೋರ್ಚಾದ ಮಾಜಿ ರಾಜ್ಯ ಖಜಾಂಚಿ ಸುನೀಲ್ ನಾಯ್ಕ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಸುರೇಶ್ ನಾಯ್ಕ್, ಕೆ.ಮಣಿಕಂಠ ರೈ, ಮತ್ತು ಲೋಕೇಶ್ ನೋಂಡಾ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.
ಈ ಪ್ರಕರಣದಲ್ಲಿ ಸುರೇಂದ್ರನ್ ಅವರು ನ್ಯಾಯಾಲಯಕ್ಕೆ ಮೊದಲ ಬಾರಿಗೆ ಹಾಜರಾಗಿದ್ದರು. ಜೊತೆಗೆ ಎಲ್ಲಾ ಆರೋಪಿಗಳು ಮತ್ತು ದೂರುದಾರ ಕೆ.ಸುಂದರ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.