ಕುಂದಾಪುರ,ಅ. 04(DaijiworldNews/AK): ಬಿ.ಅಪ್ಪಣ್ಣ ಹೆಗ್ಡೆ ಜನ್ಮದಿನೋತ್ಸವ ಸಮಿತಿ ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ರಿ., ಬಸ್ರೂರು ಪ್ರಸ್ತುತಿಯಲ್ಲಿ ಡಿ.24ರಂದು ನಡೆಯಲಿರುವ ಬಿ.ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮದಿನಾಚರಣೆಯ ಸಾರ್ವಜನಿಕ ಸಂಭ್ರಮಾಚರಣೆ ಕಾರ್ಯಕ್ರಮದ ಪೋಸ್ಟರ್ ಅನಾವರಣ ಸಡಗರ ಅ.4 ಶುಕ್ರವಾರ ಸಂಜೆ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಪೋಸ್ಟರ್ ಅನಾರವಣಗೊಳಿಸಿ ಮಾತನಾಡಿದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಮನುಷ್ಯ ಜನ್ಮ ಶ್ರೇಷ್ಠವೆಂದು ಪರಿಗಣಿಸುತ್ತೇವೆ. ಈ ಜನ್ಮದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಭಗವಂತನಿಗೆ ತೆರಿಗೆ ಪಾವತಿಸುತ್ತೇವೆ. ಆ ಮೂಲಕ ಭಗವಂತನ ಅನುಗ್ರಹ ಸಿದ್ಧಿಸುತ್ತದೆ. ಅಪ್ಪಣ್ಣ ಹೆಗ್ಡೆಯವರ ಜನಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡವರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ, ಜನಸಂಪತ್ತು ಗಳಿಸಿದವರು ಎಂದರು.
ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಅಪ್ಪಣ್ಣ ಹೆಗ್ಡೆಯವರ ಜನರ ನಡುವೆ ಬದುಕುತ್ತಿರುವ ವ್ಯಕ್ತಿ. ಯಾರಿಗೂ ಕೇಡು ಬಯಸದೆ ಬದುಕುತ್ತಿದ್ದಾರೆ. ಅವರ ಜೀವನ ಮೌಲ್ಯ, ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಬಸ್ರೂರು ಶ್ರೀ ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ನಿರಂತರವಾದ ಚಟುವಟಿಕೆಯೇ ನನ್ನ ಜೀವನದ ಯಶಸ್ಸಿನ ಗುಟ್ಟು. ಸಾರ್ವಜನಿಕರ ಜೊತೆ ಸದಾ ತೊಡಗಿಸಿಕೊಳ್ಳುತ್ತ ಬಂದಿರುವುದರಿಂದ ಎಲ್ಲರ ಪ್ರೀತ್ಯಾದರ ಸಿಕ್ಕಿತು ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಉದ್ಯಮಿ ಗಿಳಿಯಾರು ಉದಯ ಕುಮಾರ್ ಹೆಗ್ಡೆ, ರಾಮರತನ್ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊಲ್ಲೂರು ದೇವಳದ ವ್ಯವಸ್ತಾಪನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಬಾಬು ಶೆಟ್ಟಿ, ಸದಸ್ಯರಾಗಿ ಆಯ್ಕೆಯಾದ ಸುರೇಂದ್ರ ಶೆಟ್ಟಿ, ರಘುರಾಮ ದೇವಾಡಿಗ ಆಲೂರು ಇವರನ್ನು ಅಪ್ಪಣ್ಣ ಹೆಗ್ಡೆ ಅಭಿನಂದಿಸಿದರು.
ಪತ್ರಕರ್ತ ಕೆ.ಸಿ ರಾಜೇಶ ಕಾರ್ಯಕ್ರಮ ನಿರ್ವಹಿಸಿದರು. ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಿಕಾಸ್ ಹೆಗ್ಡೆ ಸ್ವಾಗತಿಸಿದರು. ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರಸಿಂಹ ಪೂಜಾರಿ ವಂದಿಸಿದರು.