ಮಂಗಳೂರು,ಜೂ 01 (Daijiworld News/MSP): ಪಿಕಪ್ ವಾಹನದಲ್ಲಿ ಜಾನುವಾರು ಸಾಗಾಟ ನಡೆಸಿ ಬಜರಂಗದಳ ಕಾರ್ಯಕರ್ತರ ಕೈಯಿಂದ ತಪ್ಪಿಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಲತೀಶ್,ಮೊಹಮ್ಮದ್ ಶರೀಫ್,ಇಬ್ರಾಹಿಂ ಕಲೀಲ್
ಹಂಡೇಲು ಮುಂಡೇಲು ಮನೆ ನಿವಾಸಿ ಮೊಹಮ್ಮದ್ ಶರೀಫ್(33), ಹಂಡೇಲಿನ ಇಬ್ರಾಹಿಂ ಕಲೀಲ್ ಅಲಿಯಾಸ್ ಮೋನಾಕ(42) ಮತ್ತು ತೆಂಕೆಡಪದವು ಗ್ರಾಮದ ಕಿನ್ನಿಬೆಟ್ಟು ಮನೆ ನಿವಾಸಿ ಲತೀಶ್(44) ಎಂಬವರನ್ನು ಬಂಧಿಸುವಲ್ಲಿ ಅಪರಾಧ ಪತ್ತೆ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ದನಗಳ್ಳತನ ಜಾಲದೊಂದಿಗೆ ಕೈಮಿಲಾಯಿಸಿದ್ದ ಇನ್ನೊಬ್ಬ ಆರೋಪಿ ಮೊಹಮ್ಮದ್ ಆರೀಫ್ ತಲೆಮರೆಸಿಕೊಂಡಿದ್ದಾನೆ.
ಗುರುವಾರ ರಾತ್ರಿ ಕೆಎ19 ಎಎ1106 ನಂಬರಿನ ಪಿಕ್ ಆಪ್ ವಾಹನ ಶಂಕಾಸ್ಪದ ರೀತಿಯಲ್ಲಿ ಅತಿ ವೇಗದಿಂದ ಬರುತ್ತಿದ್ದನ್ನು ಗಮನಿಸಿ ಬಜರಂಗದಳ ಕಾರ್ಯಕರ್ತರು ಬೆನ್ನತ್ತಿದ್ದರು,ವಾಹನವನ್ನು ಎಡಪದವು ಜಂಕ್ಷನ್ ಬಳಿ ಅಡ್ಡಹಾಕಿ ನೋಡಿದಾಗ ಟರ್ಪಾಲ್ ಒಳಗಡೆ ಹಸುವನ್ನು ಕಟ್ಟಿ ಹಾಕಿ ಸಾಗಿಸುತ್ತಿದ್ದುದು ಕಂಡು ಬಂತು. ಕಾರ್ಯಕರ್ತರನ್ನು ಕಂಡ ಆರೋಪಿಗಳು ಪರಾರಿಯಾಗಿದ್ದರು.
ಘಟನೆ ವಿವರ: ಎಡ ಪದವಿನ ಲತೀಶ್ ಎಂಬವರ ತೋಟಕ್ಕೆ ಮೇಯಲು ಬರುತ್ತಿದ್ದ ದನವೊಂದನ್ನು ಲತೀಶ್ ತನ್ನ ಮನೆ ಪಕ್ಕದಲ್ಲಿ ಕಟ್ಟಿ ಹಾಕಿದ್ದ. ಇದೇ ವೇಳೆ ರಂಜಾನಿಗೆ ದನದ ಮಾಂಸದ ಅಗತ್ಯವಿದ್ದು, ಎಲ್ಲಿಯಾದರೂ ದನವಿದೆಯೇ ಎಂದು ಕಲೀಲ್, ಲತೀಶನಲ್ಲಿ ಕೇಳಿದ. ಆಗ ಆತ, ತಾನು ತೋಟದಲ್ಲಿ ಕಟ್ಟಿ ಹಾಕಿದ ದನವನ್ನು 3000ಕ್ಕೆ ಪಡೆದು ಮಾರಾಟ ಮಾಡಿದ್ದಾನೆ. ಇದು ನೆರೆ ಮನೆಯವರು ಮೇಯಲು ಬಿಟ್ಟಿದ್ದ ದನವಾಗಿದೆ. ಇಬ್ರಾಹಿಂ ಕಲೀಲ್ ಮೇ 30ರಂದು ಸಂಜೆ ಪಿಕಪ್ ವಾಹನದಲ್ಲಿ ದನ ತುಂಬಿಸಿ, ನಿರ್ದಿಷ್ಟ ಜಾಗಕ್ಕೆ ರವಾನಿ ಸುವಂತೆ ಸೂಚಿಸಿ ವಾಹನದಲ್ಲಿ ಮೊಹಮ್ಮದ್ ಆರೀಫ್ ಮತ್ತು ಮೊಹಮ್ಮದ್ ಶರೀಫನನ್ನು ಕಳುಹಿಸಿಕೊಟ್ಟಿದ್ದ.
ಈ ವಿಷಯ ಎಡಪದವು ಬಜರಂಗ ದಳದ ಕಾರ್ಯಕರ್ತರಿಗೆ ತಿಳಿದು ಬಂದಿದ್ದು, ಎಡಪದವು ಜಂಕ್ಷನ್ ಬಳಿ ಪಿಕಪ್ ಬರುತ್ತಲೇ ತಡೆದಿದ್ದಾರೆ. ಈ ವೇಳೆ ಅದರಲ್ಲಿದ್ದ ಆರೀಫ್ ಮತ್ತು ಶರೀಫ್ ಕತ್ತಲಲ್ಲಿ ಮಸೀದಿಯತ್ತ ಪರಾರಿಯಾಗಿದ್ದರು. ಆದರೆ ಶುಕ್ರವಾರ ಲತೀಶ್, ಶರೀಫ್ ಮತ್ತು ಇಬ್ರಾಹಿಂ ಕಲೀಲ್ ಅಲಿಯಾಸ್ ಮೋನಾಕ ಸೆರೆಯಾಗಿದ್ದಾರೆ ಎಂದು ಬಜ್ಪೆ ಪೊಲೀಸರು ತಿಳಿಸಿದರು. ಬಜ್ಪೆ ಠಾಣಾಧಿಕಾರಿ ಪರಶಿವಮೂರ್ತಿಯವರ ನೇತೃತ್ವದಲ್ಲಿ ಪೊಲೀಸ್ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.