ಉಡುಪಿ,ಸೆ.30(DaijiworldNews/AK): ಕಸ್ತೂರಿರಂಗನ್ ವರದಿಯಲ್ಲಿ ಹಳ್ಲಿಹೊಳೆ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶದಿಂದ ಮತ್ತು ಜನವಸತಿ ಪ್ರದೇಶವನ್ನು ಮ್ಯಾನ್ಯುಯೆಲ್ ಸರ್ವೇ ಮುಖಾಂತರ ಸಮೀಕ್ಷೆ ಮಾಡಿ ಕೈ ಬಿಡುವಂತೆ ಆಗ್ರಹಿಸಿ ಗ್ರಾಮ ಹಿತರಕ್ಷಣಾ ಸಮಿತಿ ಹಳ್ಳಿಹೊಳೆಯ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಇವರು “ಕಸ್ತೂರಿರಂಗನ್ ವರದಿಯು ಅವೈಜ್ಞಾನಿಕವಾಗಿ ನಡೆದಿದ್ದು, ಇದರ ಸರ್ವೆಯು ಕೇವಲ ಸ್ಯಾಟಲೈಟ್ ಆಧಾರಿತ ವಾಗಿ ನಡೆದಿದೆ. ಇದರಲ್ಲಿ ಕೃಷಿ ನಡೆಸುವ ಪ್ರದೇಶವನ್ನು ಕೂಡಾ ಅರಣ್ಯ ಬುವುದಾಗಿ ಗುರುತಿಸಲಾಗಿದೆ. ಹಳ್ಳಿಹೊಳೆ ಗ್ರಾಮವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಗುರುತಿಸಲಾಗಿದ್ದು, ಇದರಿಂದಾಗಿ ಗ್ರಾಮದ ಜನರ ಜನಜೀವನಕ್ಕೆ ತೀವ್ರ ತೊಂದರೆಯಾಗುತ್ತಿದೆ. ಗ್ರಾಮದಲ್ಲಿ ಜನರಲ್ಲಿ ಗೊಂದಲ ನಿರ್ಮಾಣ ಆಗಿದೆ. ಹೀಗಾಗಿ ಸರ್ಕಾರ ಮತ್ತು ಅಧಿಕಾರಿಗಳು ಕ್ರಮ ವಹಿಸಿ ವರದಿಯ ಅನುಷ್ಟಾನದ ಕುರಿತು ಮತ್ತು ವರದಿಯ ಸಾದ್ಯಾ ಸಾಧ್ಯತೆಗಳ ಕುರಿತಾಗಿ ಸ್ವಷ್ಟ ಮಾಹಿತಿ ನೀಡಬೇಕು:” ಎಂದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಮಿತಿಯ ಸದಸ್ಯ ಮತ್ತ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ಕೊಟಾರಿ ಮಾತನಾಡಿ “ನಾವು ಕಸ್ತೂರಿ ರಂಗನ್ ವರದಿಯ ವಿರೋಧಿಗಳಲ್ಲ. ಪರಿಸರ, ಅರಣ್ಯ ಸಂರಕ್ಷಣೆಗೆ ನಾವು ಕೂಡಾ ಕಟಿಬದ್ದರಾಗಿದ್ದೇವೆ, ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಕೃಷಿ ಭೂಮಿಯನ್ನು ಕೂಡಾ ಅರಣ್ಯ ಭೂಮಿ ಎಂದು ತೋರಿಸಲಾಗಿದೆ ಇದು ಸ್ಯಾಟಲೈಟ್ ಆಧಾರಿತವಾಗಿ ನಡೆಸಿದ ಸರ್ವೆ ಅವೈಜ್ಞಾನಿಕವಾಗಿ ನಡೆದಿದೆ. ಸರಕಾರ ವರದಿಯನ್ನು ತಿರಸ್ಕರಿಸದ್ದೇವೆ ಎಂದು ಪ್ರತಿಪಾದಿಸುತ್ತಿದ್ದರೂ ಕೂಡಾ ಗ್ರಾಮಸ್ಥರಿಗೆ ಕಸ್ತೂರಿರಂಗನ್ ವರದಿಯ ನೆಪವೊಡ್ಡಿ ಅಬಿವೃದ್ದಿಗೆ ಅಡ್ಡಿ ಪಡಿಸಲಾಗುತ್ತಿದೆ. ಉಡುಪಿ ಜಿಲ್ಲೆಯ 35 ಗ್ರಾಮಗಳಲ್ಲಿ ಇಂತಹ ಸಮಸ್ಯೆ ಎದುರಾಗಿದೆ. ವರದಿಯ ಅನುಷ್ಟಾನದ ಕುರಿತು ಯಾವುದೇ ಅದಿಸೂಚನೆ ಬಾರದೇ ಇದ್ದರೂ ಕೂಡಾ ಅದಿಕಾರಿಗಳು ಭೂ ಪರಿವರ್ತನೆ ಮುಂತಾದವುಗಳಿಗೆ ಅವಕಾಶ ನೀಡುತ್ತಿಲ್ಲ. ಅರಣ್ಯ ಉಳಿಸಲು ನಾವು ಕೂಡಾ ಕಟಿಬದ್ದರು. ಆದರೆ ಅರಣ್ಯದೊಂದಿದೆ ನೂರಾರು ವರ್ಷಗಳಿಂದ ಇಲ್ಲಿ ಕೃಷಿಯನ್ನೇ ನಂಬಿಕೊಂಡು ಬಂದಿರುವ ನಾವು ಕೂಡಾ ಬದುಕಬೇಕು” ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಸದಸ್ಯರಾದ ಪ್ರಭಾಕರ್ ನಾಯಕ್, ಜಯರಾಮ್ ಪೂಜಾರಿ, ಸುರೇಶ್ ಪೂಜಾರಿ, ಸುಜಾತ ಭೋವಿ, ನೇತ್ರಾವತಿ ನಾಯಕ್, ಬೀನ್ಸ್ ಕೆ ಜೋಸೇಫ್, ಕೃಷ್ಣ ನಾಯಕ್, ರಾಘವೇಂದ್ರ ಪೂಜಾರಿ, ದಿನೇಶ್ ನಾಯಕ್ ಉಪಸ್ಥಿತರಿದ್ದರು.
--