ಬೆಂಗಳೂರು,ಜೂ 01 (Daijiworld News/MSP): ಮಾನಸಿಕವಾಗಿ ಖಿನ್ನತೆಯಿಂದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಕಾರಿನೊಳಗೆ ತನ್ನನ್ನು ತಾನು ಬಂಧಿಸಿ, ಡೋರ್ಗಳು ಹಾಗೂ ವಿಂಡೋಗಳನ್ನು ಮುಚ್ಚಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಮಂಗಳೂರು ಮೂಲದ ಕೌಶಿಕ್ ಶೆಟ್ಟಿ (34) ಎಂದು ಗುರುತಿಸಲಾಗಿದೆ.
ಇವರು ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ನಾರ್ತನ್ ನೆಟ್ವರ್ಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಮಧ್ಯಾಹ್ನ 12 ಗಂಟೆಗೆ ಮನೆಯಿಂದ ಕಾರಿನಲ್ಲಿ ಕಚೇರಿಗೆಂದು ತೆರಳಿದ್ದರು. ನಂತರ ಮನೆಗೆ ಹಿಂದಿರುಗದೆ ಕಚೇರಿಗೂ ಹೋಗದೆ ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ಕುಟುಂಬದವರು ನಾಪತ್ತೆ ದೂರನ್ನು ಫ್ರೇಜರ್ಟೌನ್ ಠಾಣೆಯಲ್ಲಿ ದಾಖಲಿಸಿದ್ದರು. ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿರುವ ಇವರಿಗೆ 2 ವರ್ಷದ ಮಗು ಇದೆ.
ಬಾಗಲೂರು ಠಾಣಾ ವ್ಯಾಪ್ತಿಯ ಹೊಸಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಸ್ವಿಫ್ಟ್ ಕಾರೊಂದು ಗುರುವಾರ ಮಧ್ಯಾಹ್ನದಿಂದ ಒಂದೇ ಸ್ಥಳದಲ್ಲಿ ನಿಂತಿರುವುದನ್ನು ಸಾರ್ವಜನಿಕರು ಗಮನಿಸಿದ್ದರು. ಈ ಬಗ್ಗೆ ಶುಕ್ರವಾರ ಮಧ್ಯಾಹ್ನ ಬಾಗಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕಾರಿನೊಳಗೆ ಮೃತದೇಹವಿತ್ತು. ಕಾರಿನ ಗಾಜು ಒಡೆದು ಶವ ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದರು.
ಕೌಶಿಕ್ ನಾಪತ್ತೆಯಾಗಿದ್ದ ಬಗ್ಗೆ ಫ್ರೇಜರ್ಟೌನ್ ಪೊಲೀಸರು ಎಲ್ಲ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಕಾರಿನ ನೋಂದಣಿ ಸಂಖ್ಯೆಯನ್ನೂ ನೀಡಿದ್ದರು. ಬಾಗಲೂರು ಪೊಲೀಸರು ಕಾರಿನ ನಂಬರ್ ಪರಿಶೀಲಿಸಿದಾಗ ಕೌಶಿಕ್ ಶವ ಎಂಬುದು ತಿಳಿದುಬಂದಿತ್ತು.
ಪೆಟ್ರೋಲ್ ಸುರಿದುಕೊಂಡರು: ಕೌಶಿಕ್ ಸಾವಿಗೂ ಮೊದಲು ಪ್ಲಾಸ್ಟಿಕ್ ಬಾಟಲಿಯಲ್ಲಿ ತೆಗೆದುಕೊಂಡು ಹೋಗಿದ್ದ ಎರಡು ಲೀಟರ್ ಪೆಟ್ರೋಲನ್ನು ತಮ್ಮ ಮೈಮೇಲೆ ಸುರಿದುಕೊಂಡಿದ್ದರು. ಬಳಿಕ ಬೆಂಕಿ ಕಡ್ಡಿ ಗೀರಿದ್ದರು. ಕಾರಿನ ಸೀಟಿಗೆ ಸಣ್ಣದಾಗಿ ಬೆಂಕಿ ಹತ್ತಿಕೊಂಡಿದೆ. ಎಲ್ಲ ಕಿಟಕಿ ಹಾಕಿದ್ದ ಹಿನ್ನೆಲೆಯಲ್ಲಿ ಗಾಳಿಯಾಡದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೆಂಕಿ ಕೂಡಲೇ ನಂದಿದ ಹಿನ್ನೆಲೆಯಲ್ಲಿ ದೇಹ ಸುಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಿತ್ರ ಎಂದರೆ ಕೌಶಿಕ್ ಕಾರಿನಲ್ಲಿ ಕುಳಿತು ಮೊಬೈಲ್ ಮೂಲಕ ಇಂಟರ್ನೆಟ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳನ್ನು ಹುಡುಕಾಡಿದ್ದರು. ಆ ಮೊಬೈಲ್ ಮೃತರ ಬಳಿಯೇ ದೊರೆತಿದೆ.