ಬಂಟ್ವಾಳ, ಸೆ.29(DaijiworldNews/AA): ಜಾತ್ಯಾತೀತ ನೆಲೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸುವ ಮೂಲಕ ಆಲ್ ಕಾರ್ಗೋ ಸಂಸ್ಥೆ ಮತ್ತು ಬಂಟ್ವಾಳದ ಬಂಟರ ಸಂಘ ಎಲ್ಲರಿಗೂ ಮಾದರಿಯಾಗಿದೆ ಎಂದು ಬೆಂಗಳೂರು ಯುನಿವರ್ಸಲ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸ್ ನ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಹೇಳಿದರು.
ಬಂಟರ ಸಂಘ ಬಂಟವಾಳ ತಾಲೂಕು (ರಿ.)ಇದರ ವತಿಯಿಂದ ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಇವರ ನೆರವಿನಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಬ್ರಹ್ಮರ ಕೂಟ್ಲುವಿನ ಬಂಟರ ಭವನದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಯೋಚನಾ ಲಹರಿಗಳೂ ಸಕಾರಾತ್ಮಕವಾಗಿ ಬದಲಾಗಬೇಕು. ಆಕಾಶವೇ ಅವಕಾಶ ಎಂಬ ಯೋಚನಾ ಶಕ್ತಿಯನ್ನು ಬೆಳೆಸಿಕೊಂಡು ಮುನ್ನಡೆದಾಗ ಸಾಧನೆ ಸುಲಭ ಸಾಧ್ಯ. ನಿರಂತರ ಶ್ರಮ ಶ್ರದ್ಧೆ, ಶಿಕ್ಷಣ ನಮ್ಮನ್ನು ಕಾಪಾಡುತ್ತದೆ, ಆದರೆ ಕರುಣೆ ಮತ್ತು ವಿಶ್ವಾಸ ನಮ್ಮ ಜೊತೆಯಾಗಿರಬೇಕು ಎಂದರು.
ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಅವರು ಸಭಾಧ್ಯಕ್ಷತೆ ವಹಿಸಿ, ಪ್ರಸ್ತಾವನೆಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಲ್ ಕಾರ್ಗೊ ಲಾಜಿಸ್ಟಿಕ್ಸ್ ನ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಡಾ| ನೀಲ್ರತನ್ ಶಿಂಧೆಯವರು ಮಾತನಾಡಿ, ಆಲ್ ಕಾರ್ಗೋ ಸಂಸ್ಥೆಯ ಮುಖ್ಯಸ್ಥರಾದ ಶಶಿಕಿರಣ್ ಶೆಟ್ಟಿಯವರು ಹಾಗೂ ಆರತಿ ದಂಪತಿ ಹುಟ್ಟೂರ ಬಗ್ಗೆ ಹೆಚ್ಚು ಅಭಿಮಾನ ಇರಿಸಿಕೊಂಡಿದ್ದಾರೆ, ಅದರಂತೆ ತಮ್ಮ ಕಂಪೆನಿಯ ಲಾಭಾಂಶವನ್ನು ಈ ರೀತಿಯ ಸಾಮಾಜಿಕ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳ¸ನ್ನು ಹಾಗೂ ಹಲವು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಆಲ್ ಕಾರ್ಗೋ ಸಂಸ್ಥೆಯ ಮಂಗಳೂರು ಪ್ರತಿನಿಧಿ ಸವಿಸ್ತಾರ್ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸ್ಥಾಪಕ ಅಧ್ಯಕ್ಷ ಕಿರಣ್ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರತಿಭಾ ಎ. ರೈ, ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್. ಭಂಡಾರಿ, ವಿದ್ಯಾರ್ಥಿ ವೇತನ ನಿರ್ವಹಣಾ ಸಂಚಾಲಕರಾದ ಹೆಚ್. ಸಂಕಪ್ಪ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಸ್ವಾಗತಿಸಿದರು, ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ವಂದಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬಂಟ ಸಮಾಜ ಸೇರಿದಂತೆ ವಿವಿಧ ಜಾತಿ ಮತದ 1,200 ವಿದ್ಯಾರ್ಥಿಗಳಿಗೆ ಸುಮಾರು ೪೫ ಲಕ್ಷ ರೂ ವೆಚ್ಚದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.