ಬೆಳ್ತಂಗಡಿ ನ 29 : ನಾಲ್ಕು ಜನ ದರೋಡಕೋರರ ತಂಡವೊಂದು ಮನೆಗೆ ನುಗ್ಗಿ ನಗ- ನಗದು ದೋಚಿರುವ ಘಟನೆ ನ ೨೮ ರ ಮಂಗಳವಾರ ರಾತ್ರಿ ಧರ್ಮಸ್ಥಳದ ದೇಂತಾಜೆ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ನಾಗೇಂದ್ರ ಪ್ರಸಾದ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ದರೋಡೆಕೋರರು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ನಾಗೇಂದ್ರ ಅವರು ರಾತ್ರಿ 10. 30 ಕ್ಕೆ ಮನೆಗೆ ಬಂದು ಬೀಗ ತೆಗೆಯುತ್ತಿದ್ದಾಗ ಏಕಾಏಕಿ ದರೋಡೆಕೋರರು ಮನೆಗೆ ನುಗ್ಗಿದ್ದಾರೆ. ಅವರನ್ನು ಕಟ್ಟಿ ಹಾಕಿದ ತಂದ ಮನೆಯನ್ನೆಲ್ಲಾ ಜಾಲಾಡಿ 40000 ನಗದು, ಚಿನ್ನದ ಸರ, ಕಾರ್ ಕೀ, ಮೊಬೈಲ್,ಎ ಟಿ ಎಂ ಕಾರ್ಡ್ ದೋಚಿದ್ದಾರೆ. ಈ ಸಂದರ್ಭ ನಾಗೇಂದ್ರ ಒಬ್ಬರೇ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.