ಉಡುಪಿ,ಸೆ.28(DaijiworldNews/TA):ಉಡುಪಿ ಪರ್ಯಾಯೋತ್ಸವಕ್ಕೆ ಸರಕಾರದಿಂದ ಹಣವನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಹಣ ಬಿಡುಗಡೆ ಮಾಡುತ್ತೇವೆ ಎಂಬ ಆಶ್ವಾಸನೆಯನ್ನೂ ಸರಕಾರ ನೀಡಿರಲಿಲ್ಲ. ಹೀಗಾಗಿ ಶಾಸಕರು ಪರ್ಯಾಯದ ಹಣ ಬಂದಿಲ್ಲ ಎನ್ನುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸ್ಪಷ್ಟ ಪಡಿಸಿದ್ದಾರೆ.
ಶುಕ್ರವಾರ ಸಂಜೆ ನಗರದ ಖಾಸಗಿ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಉಡುಪಿ ಪರ್ಯಾಯೋತ್ಸವದ ಕಮಿಟಿಯಲ್ಲಿ ನಾನು ಇದ್ದೆ. ಹಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ವಿನಂತಿಸಲಾಗಿತ್ತು. ಸರಕಾರವು ಬಿಡುಗಡೆ ಮಾಡುತ್ತೇವೆ ಎಂದು ಹೇಳಿಲ್ಲ. ಆಶ್ವಾಸನೆ ನೀಡಿ, ಬಿಡುಗಡೆ ಮಾಡದೇ ಇದ್ದಲ್ಲಿ ತಪ್ಪು. ಆದರೆ ಸರಕಾರ ಈ ಬಗ್ಗೆ ಯಾವುದೇ ಆಶ್ವಾಸನೆ ನೀಡಿರಲಿಲ್ಲ ಎಂದವರು ತಿಳಿಸಿದರು.
ಉಡುಪಿ ಶಾಸಕರು ಜಿಲ್ಲೆಯಲ್ಲಿ 40 ಸಾವಿರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಇದುವರೆಗೆ 38,765 ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದು, ಅದರಲ್ಲಿ 37,395 ಕಾರ್ಡುದಾರರು ವಾರ್ಷಿಕ 1.20 ಲಕ್ಷ ಆದಾಯವನ್ನು ಹೊಂದಿರುವುದರಿಂದ ರದ್ದಾಗಿದೆ. ಬಡವರ ಬಿಪಿಎಲ್ ಕಾರ್ಡ್ ಗಳು ರದ್ದಾಗಿವೆ ಎಂಬ ಶಾಸಕರ ಹೇಳಿಕೆ ದಾಖಲೆಯನ್ನು ಕೊಡಲಿ. ಇಲ್ಲವಾದಲ್ಲಿ ರಾಜಿನಾಮೆ ನೀಡುವುದು ಜಂಟಲ್ ಮ್ಯಾನ್ ನ ಲಕ್ಷಣ ಎಂದರು.
ರಾಜ್ಯ ಸರಕಾರ ದಿವಾಳಿಯಾಗಿದೆ ಎಂಬ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರ ದಿವಾಳಿಯಾಗಿದೆ ಎನ್ನುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಿಂದ ಈ ಜಿಲ್ಲೆಗೆ ಎಷ್ಟು ಅನುದಾನ ಬಂದಿದೆ. ದೇಶದ ಬಜೆಟ್ 48 ಲಕ್ಷ ಕೋಟಿ. ರಾಜ್ಯದ ಬಜೆಟ್ 3.50 ಲಕ್ಷ ಕೋಟಿ. ಅದರಲ್ಲಿ 2 ಸಾವಿರ ಕೋಟಿಯನ್ನು ಈ ಕ್ಷೇತ್ರಕ್ಕೆ ತರಲಾಗದವರು ಯಾಕೆ ಶಾಸಕ ಸ್ಥಾನದಲ್ಲಿ ಇರಬೇಕು. ಮೋದಿಯವರ ಬಳಿ ಹೋಗಿ ಅನುದಾನ ಕೇಳಲಿ, ಅವರಿಗೆ ಭಯವಾದರೇ ನಮ್ಮನ್ನು ಕರೆದುಕೊಂಡು ಹೋಗಲಿ, ನಾವು ಅವರೊಂದಿಗೆ ಮಾತನಾಡುತ್ತೇವೆ ಎಂದರು.
ಶಾಸಕರಾಗಿ 1 ವರ್ಷ 4 ತಿಂಗಳು ಕಳೆದಿವೆ. ಇಂದ್ರಾಳಿ ರೈಲ್ವೇ ಮೇಲ್ಸೆತುವೆ, ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ಮಲ್ಪೆ - ಹೆಬ್ರಿ ರಾಷ್ಟ್ರೀಯ ಹೆದ್ದಾರಿಯ ಆದಿ ಉಡುಪಿ ಭಾಗದ ಸಮಸ್ಯೆ ಪರಿಹಾರವಾಗಿಲ್ಲ. ಕೋಮುಗಲಭೆ ಸೃಷ್ಟಿಸಿ ಶಾಸಕರಾಗಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಇದ್ದಲ್ಲಿ ಮುಂದಿನ ಬಾರಿಗೆ ಜನರು ಆರ್ಶೀವಾದ ಮಾಡುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರು ಬಡವರಿಗೆ, ದೀನ ದುರ್ಬಲರಿಗೆ ನೀಡಿದ್ದಷ್ಟು ಅನುದಾನ ಬೇರೆ ಯಾವ ಮುಖ್ಯಮಂತ್ರಿಯೂ ನೀಡಿಲ್ಲ. ಆದರೆ ಉಡುಪಿ ಶಾಸಕರ ಕಚೇರಿ ಯಾವಾಗಲೂ ಬಾಗಿಲು ಹಾಕಿರುತ್ತದೆ. ಕ್ಷುಲ್ಲಕ ಕಾರಣಗಳಿಗೆ ಶಾಸಕರು ಪತ್ರಿಕಾಗೋಷ್ಠಿ ನಡೆಸುವ ಬದಲು, ಈ ಭಾಗದ ಯುವ ಜನಾಂಗಕ್ಕೆ ಉದ್ಯೋಗವನ್ನು ಸೃಷ್ಟಿಸಲಿ. ಕ್ಷೇತ್ರದ ಅಭಿವೃದ್ಧಿಗೆ ಅವರೊಂದಿಗೆ ನಾವು ಕೈ ಜೋಡಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ಕಾಂಗ್ರೆಸ್ ಮುಖಂಡ ದಿನಕರ್ ಹೇರೂರು, ಎನ್.ಎಸ್.ಯು.ಐ ಮುಖಂಡ ಶರತ್ ಕುಂದರ್ ಉಪಸ್ಥಿತರಿದ್ದರು.