ಕುಂದಾಪುರ, ಸೆ.27(DaijiworldNews/AA): ಕರ್ನಾಟಕ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ಬುಲ್ ಟ್ರಾಲ್ ಮೀನುಗಾರಿಕೆ ನಿಷೇಧದ ಕುರಿತು ರಾಜ್ಯ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರನ್ನು ಬೆಂಗಳೂರಿನ ಸಚಿವರ ಕಛೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿ ಮನವಿ ಸಲ್ಲಿಸಿದರು.
ಬುಲ್ ಟ್ರಾಲ್ ನಿಷೇಧದ ಕುರಿತು ಸರಕಾರ ಈ ಹಿಂದೆ ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ ಸಚಿವ ಮಂಕಾಳ ವೈದ್ಯ, ಬುಲ್ ಟ್ರಾಲ್ ಮೀನುಗಾರಿಕೆ ಮಾಡಿದ ಬೋಟಿನ ಡೀಸೆಲ್ ಸಬ್ಸಿಡಿಯನ್ನು ರದ್ದು ಮಾಡುವುದಾಗಿ ತಿಳಿಸಿದ್ದಾರೆ.
ಸಚಿವರ ಭೇಟಿಗೂ ಮುನ್ನ ಕರ್ನಾಟಕ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಪ್ರಮುಖರು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಬುಲ್ ಟ್ರಾಲ್ ಮೀನುಗಾರಿಕೆ ಸಹಿತ ನಾಡದೋಣಿ ಮೀನುಗಾರರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಕರ್ನಾಟಕ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನಾಗೇಶ ಖಾರ್ವಿ, ಮದನ್ ಕುಮಾರ್, ಯಶವಂತ ಗಂಗೊಳ್ಳಿ, ಸುರೇಶ ಖಾರ್ವಿ ಮರವಂತೆ, ವಾಸುದೇವ ಖಾರ್ವಿ ಮರವಂತೆ, ನವೀನಚಂದ್ರ ಉಪ್ಪುಂದ, ವೆಂಕಟರಮಣ ಖಾರ್ವಿ ಉಪ್ಪುಂದ, ಚಂದ್ರ ಖಾರ್ವಿ ಕೊಡೇರಿ, ಮಹೇಶ ಖಾರ್ವಿ ಹಾಗೂ ಒಕ್ಕೂಟದ ಪ್ರಮುಖರು ಉಪಸ್ಥಿತರಿದ್ದರು.