ಕಾರ್ಕಳ, ಸೆ.27(DaijiworldNews/AA): ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯನವರ ತೇಜೋವಧೆ ಮಾಡಿ ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಅತಂತ್ರಗೊಳಿಸುವ ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಡ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿಯಾಗಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ತಿಳಿಸಿದ್ದಾರೆ.
ಮೂಡಾ ಪ್ರಕರಣವನ್ನು ಬಳಸಿಕೊಂಡು ಸಿಎಂ ಸಿದ್ದರಾಮಯ್ಯನವರನ್ನು ಇಳಿಸಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಗೊಂದಲ ಸೃಷ್ಟಿಸಿ ಅಧಿಕಾರಕ್ಕೆ ಬರುವ ರಾಜ್ಯ ಬಿಜೆಪಿಯ ವ್ಯರ್ಥ ಹುನ್ನಾರದ ಹಿಂದೆ ಕೇಂದ್ರದ ವ್ಯವಸ್ಥಿತ ಕೈವಾಡವಿದೆ. ಇದಕ್ಕೆ ಹರ್ಯಾಣದ ಸೋನಿಪತ್ ನಲ್ಲಿ ಪ್ರಧಾನಿ ಮೋದಿ ರಾಜ್ಯದ ಮೂಡ ಪ್ರಕರಣವನ್ನು ಉಲ್ಲೇಖಿಸಿ ಮಾಡಿದ ಚುನಾವಣಾ ಪ್ರಚಾರ ಭಾಷಣ ಒಂದು ಉದಾಹರಣೆಯಾಗಿದೆ. ಅಪರಾಧ ಸಾಬೀತಾಗದೆ ಕಾಂಗ್ರೆಸ್ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿರುವುದು ಎಷ್ಟು ಸರಿ ಎನ್ನುವುದು ಉಲ್ಲೇಖನೀಯ ಎಂದು ಪ್ರಶ್ನಿಸಿದ್ದಾರೆ.
ಕಳೆದ ತನ್ನ 10 ವರ್ಷಗಳ ಆಡಳಿತಾವಧಿಯಲ್ಲಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ 10ಕ್ಕೂ ಹೆಚ್ಚು ವಿರೋಧ ಪಕ್ಷಗಳ ಚುನಾಯಿತ ಸರ್ಕಾರಗಳನ್ನು ಬೀಳಿಸಿದ, ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ 400ಕ್ಕೂ ಅಧಿಕ ಕಾಂಗ್ರೆಸ್ ಹಾಗೂ ಅನ್ಯಪಕ್ಷಗಳ ಶಾಸಕರನ್ನು ತನ್ನ ಪಕ್ಷಕ್ಕೆ ಪಕ್ಷಾಂತರಿಸಿದ, ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ಭ್ರಷ್ಟಾಚಾರಿಗಳೆಂದು ಪ್ರಕರಣ ದಾಖಲಿಸಿಕೊಂಡವರಿಗೆ ಅಧಿಕಾರದ ಹುದ್ದೆಕೊಟ್ಟು ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಿದವರಿಗೆ ಅದು ದೇಶದ ಪ್ರಧಾನಿಗಾಗಲಿ, ಬಿಜೆಪಿಯ ಯಾವುದೇ ನಾಯಕನಿಗಾಗಲಿ ಮೂಡಾ ಪ್ರಕರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯನವರ ಮೇಲಿನ ಅಪವಾಧ ವಾಸ್ತವತೆ ತನಿಖೆಯಿಂದ ಹೊರಬರಲಿದೆ ಎಂದು ಹೇಳಿದ್ದಾರೆ.