ಮಂಗಳೂರು,ಸೆ.26(DaijiworldNews/TA):ಮೊಬೈಲ್ ವಿಚಾರಕ್ಕೆ ಬಾಗಲಕೋಟೆ ಮೂಲದ ಬಸವರಾಜ ವದ್ದ ಅಲಿಯಾಸ್ ಮುದುಕಪ್ಪ (39) ಎಂಬುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಧರ್ಮರಾಜ್ ಸುವರ್ಣ ಎಂಬುವವರನ್ನು ಬಂಧಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಈ ಹತ್ಯೆ ನಡೆದಿದ್ದು ಹನುಮಂತ ದುರುಗಪ್ಪ ವಡ್ಡ ಎಂಬವರು ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಅನ್ವಯ ತನಿಖೆಗೆ ಇಳಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿ ಧರ್ಮರಾಜ್ ಸುವರ್ಣ (50) ಎಂಬುವವರನ್ನು ಬಂಧಿಸಿದ್ದಾರೆ.
ಕೇರಳದ ಕೋಝಿಕ್ಕೋಡ್ ನ ಚೊಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಪಣಂಬೂರು ಪೊಲೀಸರು ದಸ್ತಗಿರಿ ಮಾಡುವ ಸಂಧರ್ಭದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.ಆರೋಪಿಯು ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದು, ತೋಟಾ ಬೆಂಗ್ರೆಯಲ್ಲಿ ವಾಸಮಾಡಿಕೊಂಡಿದ್ದ ಎಂಬುವುದಾಗಿ ತಿಳಿದು ಬಂದಿದೆ.
ಆರೋಪಿ ಧರ್ಮರಾಜ್ ಸುವರ್ಣ ಮತ್ತು ಮೃತ ಮುತ್ತು ಬಸವರಾಜ ವಡ್ಡರ್ ಮುದುಕಪ್ಪ ಕಳೆದ ಕೆಲವು ಸಮಯದಿಂದ ಒಬ್ಬರಿಗೊಬ್ಬರು ಪರಿಚಯದವರಾಗಿದ್ದು, ಇತ್ತೀಚೆಗೆ ಆರೋಪಿಯ ಧರ್ಮರಾಜ್ ಸುವರ್ಣ ಹೊಸ ಮೊಬೈಲ್ ಖರೀದಿಸಿದ್ದು, ಆ ಮೊಬೈಲ್ ನ್ನು ಮೃತ ಮುತ್ತು ಬಸವಾರಾಜ್ ತೆಗೆದುಕೊಂಡು ವಾಪಾಸ್ ನೀಡದೆ ಮೊಬೈಲ್ ಹಾಳು ಮಾಡಿದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ಅತಿರೇಕಕ್ಕೆ ಹೋಗಿ ಆರೋಪಿ ವಡ್ಡರ್ ಮುದುಕಪ್ಪನನ್ನು ಮರದ ಸೋಂಟೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಐ.ಪಿ.ಎಸ್. ರವರ ಮಾರ್ಗದರ್ಶನದಂತೆ ತಂಡ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.