ಉಡುಪಿ, ಸೆ.25(DaijiworldNews/AA): ಎಲ್ಲಾ ಖಾಸಗಿ ಬಸ್ ಗಳು ಬಾಗಿಲುಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಖಾಸಗಿ ಬಸ್ ಮಾಲಕರ ಸಭೆಯು ಮಲ್ಪೆ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ವಿವಿಧ ಖಾಸಗಿ ಬಸ್ ಮಾಲೀಕರು ಮತ್ತು ವ್ಯವಸ್ಥಾಪಕರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಅಕ್ಟೋಬರ್ 31ರೊಳಗೆ ಎಲ್ಲಾ ಖಾಸಗಿ ಬಸ್ಗಳು ಬಾಗಿಲುಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಯಾವುದೇ ಸಂದರ್ಭದಲ್ಲೂ ಪ್ರಯಾಣಿಕರು ಫುಟ್ಬೋರ್ಡ್ಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಬಾರದು. ಹಾಗೂ ಹೆಚ್ಚುವರಿಯಾಗಿ, ಬಸ್ಗಳಲ್ಲಿ ಅಳವಡಿಸಲಾಗಿರುವ ಗಟ್ಟಿಯಾದ ಹಾರ್ನ್ಗಳನ್ನು ತೆಗೆದುಹಾಕಬೇಕು ಎಂದು ಆದೇಶಿಸಲಾಯಿತು. ಜೊತೆಗೆ ಬಸ್ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸದಂತೆ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಮಹಿಳೆಯರು ಮತ್ತು ಮಕ್ಕಳೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಬಸ್ ಚಾಲಕರು ಮತ್ತು ನಿರ್ವಾಹಕರುಗಳಿಗೆ ಸೂಚನೆ ನೀಡಲಾಯಿತು. ಹಾಗೂ ಎಲ್ಲರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಯಿತು.
ಸಭೆಯಲ್ಲಿ ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು, ಪ್ರೊಬೇಷನರಿ ಡಿವೈಎಸ್ಪಿ ಗೀತಾ ಪಾಟೀಲ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ.ನಾಯ್ಕ್, ಮೋಟಾರು ವಾಹನ ನಿರೀಕ್ಷಕ ಮಾರುತಿ ನಾಯ್ಕ್, ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ ಎಂ, ಉಡುಪಿ ಸಂಚಾರ ಠಾಣೆ ಪಿಎಸ್ಐ ಸುದರ್ಶನ ದೊಡ್ಡಮನಿ ಉಪಸ್ಥಿತರಿದ್ದರು.