ಕುಂದಾಪುರ ನ 29 : ಮುಂದಿನ ದಿನಗಳಲ್ಲಿ ನಡೆಯಲಿರುವ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಪ್ರಯುಕ್ತ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಶಾಂತಿ ಸಭೆ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಂಜೀವ ಎಂ. ಪಾಟೀಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂಗಳ ಹಬ್ಬಕ್ಕೆ ಮುಸ್ಲಿಂರು, ಮುಸ್ಲಿಂರ ಹಬ್ಬಗಳಿಗೆ ಹಿಂದೂ ಹಾಗೆಯೇ ಕ್ರಿಸ್ಮಸ್ಗೂ ಅನ್ಯ ಧರ್ಮಿಯರೆಲ್ಲ ಸಹಕಾರ ನೀಡಿ, ಸೌಹಾರ್ದತೆ ಮೆರೆಯಬೇಕಿದೆ. ಇದರಿಂದ ಮಕ್ಕಳಿಗೂ ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ. ಶಾಂತಿ- ಸೌಹಾರ್ದತೆಗೆ ಕುಂದಾಪುರದಿಂದಲೇ ನಾಂದಿ ಹಾಡುವಂತಾಗಲಿ ಎಂದ ಅವರು ಕಂಡ್ಲೂರಿನಲ್ಲಿ ಕಳೆದ 3-4 ವಾರಗಳಿಂದ ಜನ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ಕೊಡಲಾಗುವುದು ಎಂದರು.
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರು ಕೊಡಿ ಹಬ್ಬದ ಕುರಿತು ಮಾಹಿತಿ ನೀಡಿದರು. ಕೋಡಿ, ಕಂಡ್ಲೂರು, ಹಂಗಳೂರು, ಮೂಡು ಗೋಪಾಡಿ, ಹೆಮ್ಮಾಡಿ ಮಸೀದಿಗಳ ಮುಖ್ಯಸ್ಥರು ಈದ್ ಮಿಲಾದ್ ಆಚರಿಸುವ ಬಗ್ಗೆ ವಿವರಿಸಿದರು.
ಕುಂದಾಪುರದ ಕೆಲವೆಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ನಿಯಂತ್ರಿಸುವ ಸಂಬಂಧ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಬುಧವಾರದಿಂದಲೇ ಹೊಯ್ಸಳ ಪೊಲೀಸ್ ವಾಹನ ರಾತ್ರಿ ವೇಳೆ ಗಸ್ತು ತಿರುಗಲಿದೆ ಎಂದರು.
ವ್ಯಾಪಕ ಗಾಂಜಾ ಮಾರಾಟ
ಕುಂದಾಪುರದ ಶಾಸ್ತ್ರಿ ಪಾರ್ಕಿನ ಪಕ್ಕದಲ್ಲಿ ಗಾಂಜಾ ಮಾರಾಟ ವ್ಯಾಪಕವಾಗುತ್ತಿದ್ದು, ಇದಕ್ಕೆ ನಮ್ಮೂರಿನ ಮಕ್ಕಳು ಬಲಿಯಾಗುತ್ತಿದ್ದಾರೆ. ಗಾಂಜಾ ಸಾಗಾಟದ ಮೂಲವನ್ನು ಪತ್ತೆ ಹಚ್ಚಿ ಎಂದು ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಸಲಹೆ ನೀಡಿದರು. ಈ ಬಗ್ಗೆ ಮಕ್ಕಳು, ಹೆತ್ತವರನ್ನು ಕರೆಸಿ ಅರಿವು ಮೂಡಿಸಲಾಗುವುದು ಎಂದು ಎಸ್ಪಿ ಹೇಳಿದರು. ಕುಂದಾಪುರ ಪೇಟೆಯ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಿ ಎಂದು ಬಿಜೆಪಿ ನಾಯಕ ಕಿಶೋರ್ ಕುಮಾರ್ ಮನವಿ ಮಾಡಿದರು.ಕುಂದಾಪುರ ಸಂಚಾರಿ ಠಾಣಾ ಎಸ್ಐ ಕೆ. ಜಯ, ಕಂಡ್ಲೂರು ಎಸ್ಐ ಶ್ರೀಧರ್ ನಾಯ್ಕ್, ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.
ಬೈಕ್ ರ್ಯಾಲಿ ಬೇಡ
ಹಬ್ಬಗಳ ಸಂದರ್ಭದಲ್ಲಿ ಮೆರವಣಿಗೆ ಮಾಡಿ, ಆದರೆ ಈ ಬಾರಿ ಬೈಕ್ ರ್ಯಾಲಿ ಬೇಡ. ಎಲ್ಲರೂ ಇದಕ್ಕೆ ಸಹಕರಿಸಬೇಕು. ಬೈಕ್ ರ್ಯಾಲಿಯಿಂದ ಸಂಚಾರಕ್ಕೆ, ಜನಜೀವನಕ್ಕೂ ತೊಂದರೆಗಳಾಗುವುದರಿಂದ ಬೇಡ ಎಂದು ಎಸ್ಪಿ ಹೇಳಿದರು.