ಮಂಗಳೂರು, ಮೇ31(Daijiworld News/SS): ಶಾಂತಿ, ಪ್ರೀತಿ, ಸಹನೆ, ಮಾನವೀಯತೆಯ ಪ್ರತೀಕವಾಗಿರುವ ಗುಡ್ ಫ್ರೈಡೇ ಕ್ರೈಸ್ತರಿಗೆ ಪವಿತ್ರ ದಿನವಾಗಿದ್ದು, ಆ ದಿನ ನೀಡಲಾಗುವ ರಜೆಯನ್ನು ರದ್ದುಪಡಿಸುವ ಅಥವಾ ನಿರ್ಬಂಧಿತ ರಜೆಯನ್ನಾಗಿ ಮಾರ್ಪಡಿಸುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.
ಈ ಕುರಿತು ಐವನ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಜಯಂತಿಗಳ ರಜೆಯನ್ನು ಕಡಿತಗೊಳಿಸುವ ಪಟ್ಟಿಯಲ್ಲಿ ಗುಡ್ ಫ್ರೈಡೇ ಕೂಡ ಸೇರಿದೆ ಎಂಬುದಾಗಿ ಮಂಗಳೂರಿನ ಕೆಥೋಲಿಕ್ ಸಭಾ ಆತಂಕ ವ್ಯಕ್ತಪಡಿಸಿತ್ತು.
ಉಪ ಮುಖ್ಯಮಂತ್ರಿಗಳು ಮನವಿಯನ್ನು ಸ್ವೀಕರಿಸಿ ಪರಶೀಲನೆ ನಡೆಸುವುದಾಗಿ ತಿಳಿಸಿದ್ದು, ರಜೆಯನ್ನು ರದ್ದುಪಡಿಸದಿರುವ ಭರವಸೆ ನೀಡಿರುವುದಾಗಿ ಐವನ್ ಡಿಸೋಜಾ ತಿಳಿಸಿದ್ದಾರೆ.
ಸರ್ಕಾರಿ ರಜಾ ದಿನಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ರಚಿಸಿದ ಸಚಿವ ಸಂಪುಟ ಉಪ ಸಮಿತಿ ಹಲವು ಜಯಂತಿಗಳ ರಜೆಯನ್ನು ಕಡಿತಗೊಳಿಸಬೇಕೆಂಬ ತೀರ್ಮಾನಕ್ಕೆ ಬಂದಿದೆ. ಈ ನಡುವೆ ಕ್ರೈಸ್ತರ ಪವಿತ್ರ ದಿನವಾದ ಗುಡ್ ಫ್ರೈಡೇ ರಜೆಯನ್ನು ರದ್ದುಪಡಿಸಬಾರದು ಅಥವಾ ನಿರ್ಬಂಧಿತ ರಜೆಯನ್ನಾಗಿ ಮಾರ್ಪಡಿಸಬಾರದು ಎನ್ನುವ ಕೂಗು ಕೇಳಿ ಬರುತ್ತಿದೆ.