ಉಡುಪಿ,ಮೇ 31(Daijiworld News/MSP): ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಹಲವು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ನೀರು ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬೆಳಿಗ್ಗೆ ಶಾಲೆ ನಡೆಸಿ ಮಧ್ಯಾಹ್ನ ರಜೆ ನೀಡುವ ಪರಿಸ್ಥಿತಿ ಬಂದೊದಗಿದೆ. ಉಡುಪಿ ಜಿಲ್ಲೆಯಲ್ಲಿರುವ ಒಟ್ಟು 77 ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡಿದೆ.
ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನಲೆಯಲ್ಲಿ ಶಾಲೆಗಳಿಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂದು ಉಡುಪಿ ನಗರಸಭೆ ತಿಳಿಸಿದೆ. ಹೀಗಾಗಿ ಅನಿವಾರ್ಯವಾಗಿ ಶಾಲೆ ಮಧ್ಯಾಹ್ನದವರೆಗೆ ಮಾತ್ರ ನಡೆಸಬೇಕಾದ ಸ್ಥಿತಿ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಬುಧವಾರವಷ್ಟೇ ಸರ್ಕಾರಿ ಹಾಗೂ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾಂಭಗೊಂಡಿವೆ. ಆದರೆ ಕುಡಿಯುವ ನೀರಿನ ಸಮಸ್ಯೆ ಶಾಲೆಗಳನ್ನು ಕಾಡತೊಡಗಿದ್ದು ಮಕ್ಕಳಿಗೆ ಮಧ್ಯಾಹ್ನ ನೀಡುವ ಬಿಸಿಯೂಟ ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆಯನ್ನು ಡಿಡಿಪಿಐಗೂ ಮನವರಿಕೆ ಆಗಿದ್ದು, ಬೆಳಗ್ಗಿನ ಸಮಯ ಶಾಲೆ ನಡೆಸಿ, ಮಧ್ಯಾಹ್ನ ಮಕ್ಕಳನ್ನು ಮನೆಗೆ ಊಟಕ್ಕೆ ಕಳುಹಿಸುವಂತೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ.
ಇನ್ನು ಕೆಲವೆಡೆ ಶಾಲೆಗಳಿಗೆ ದಾನಿಗಳ ನೆರವಿನಿಂದ, ಶಾಲಾಡಳಿತ ಮಂಡಳಿಯ ಸಹಕಾರದಿಂದ ನೀರು ಪೂರೈಕೆ ನಡೆಯುತ್ತಿದ್ದು ಮಕ್ಕಳ ಬಿಸಿಯೂಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.