ಬಂಟ್ವಾಳ, ಮೇ 31(Daijiworld News/MSP): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರಿಗೆ ಬಂದಿರುವ ಹಲ್ಲೆ ಮತ್ತು ಹತ್ಯೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳ ಕೃತ್ಯ ಖಂಡನೀಯ. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಪೋಲೀಸರು ನಿಷ್ಪಕ್ಷಪಾತವಾಗಿ ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಬಿ. ಸಿರೋಡಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಿಥುನ್ ರೈ ಮೇಲೆ ಅವ್ಯಾಚ್ಚ ಶಬ್ದಗಳಿಂದ ಘೋಷಣೆ ಕೂಗಿರುವ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ.ಲೋಕಸಭಾ ಚುನಾವಣೆಯ ಬಳಿಕ ವಿಜಯೋತ್ಸವ ಸಂದರ್ಭದಲ್ಲಿ ಪ್ರಚೋದನಾಕಾರಿ ರೀತಿಯಲ್ಲಿ ಘೋಷಣೆ ಮಾಡಿರುವುದು ಅಕ್ಷಮ್ಯ ಅಪರಾಧ ಹಾಗೂ ಪೋಲೀಸರು ಈ ಬಗ್ಗೆ ಕಠಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸಿದರು. ಪೋಲೀಸರಿಗೆ ಕಾನೂನು ಕ್ರಮ ಕೈಗೊಳ್ಳದಂತೆ ಚುನಾಯಿತ ಪ್ರತಿನಿಧಿಗಳಿಂದ ಒತ್ತಡಗಳು ಹಾಕಿದ್ದಾರೆ ಎಂಬ ಖಚಿತವಾದ ಮಾಹಿತಿ ಇದೆ.ಇಂತಹ ಯಾವುದೇ ಒತ್ತಡಕ್ಕೆ ಮಣಿಯದೆ ಪೋಲೀಸರು ಕೆಲಸ ಮಾಡುವಂತೆ ಮನವಿ ಮಾಡಿದರು.
ಶಾಲೆಗೆ ಅಕ್ಕಿ ನಿಲ್ಲಿಸಿದ್ದೇನೆ ಎಂದು ಪ್ರಚಾರ ಮಾಡಲಾಗಿದೆ. ನಾನು ಅಕ್ಕಿಯನ್ನು ನಿಲ್ಲಿಸಿಲ್ಲ. ಕೊಲ್ಲೂರು ದೇವಸ್ಥಾನದಿಂದ ವರ್ಷಕ್ಕೆ 4 ಕೋಟಿ ರೂ ಸಲ್ಲಿಕೆಯಾಗುತ್ತಿದ್ದ ದೇವರ ದುಡ್ಡು ಉಳಿಸಿದ್ದೇನೆ. ಅದಕ್ಕೆ ಕೊಲ್ಲೂರು ದೇವಿಯ ಆಶೀರ್ವಾದವು ನನ್ನ ಮೇಲಿದೆ ಎಂದರು.