ಮಂಗಳೂರು, ಮೇ30(Daijiworld News/SS): ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.
ಮಂಗಳೂರಿನ ಸಿಟಿ ಸೆಂಟರ್ ಎದುರು ವಸಂತಮಹಲ್ ಬಳಿ ಸುಮಾರು 5.00 ಗಂಟೆಗೆ ಸರಿಯಾಗಿ ಹೂವಿನ ವ್ಯಾಪಾರಿ ಫಕೀರಬ್ಬ ಅವರು ಮಹಿಳೆಯರಿಗೆ ಉಚಿತವಾಗಿ ಮಲ್ಲಿಗೆ ಹೂವು ನೀಡಿದ್ದಾರೆ. ಸುಮಾರು, 100 ಅಟ್ಟೆ (400 ಚೆಂಡು) ಮಲ್ಲಿಗೆಯನ್ನು ಮಹಿಳೆಯರಿಗೆ ಉಚಿತವಾಗಿ ಹಂಚಿದ್ದಾರೆ.
ಬಿಜೆಪಿಗೆ ಭಾರಿ ಗೆಲುವು ತಂದುಕೊಟ್ಟ ನರೇಂದ್ರ ಮೋದಿ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಗುರುವಾರ ಸಂಜೆ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಮ್ಸ್ಟೆಕ್ ರಾಷ್ಟ್ರಗಳ ಪ್ರತಿನಿಧಿಗಳು, ಅತಿಗಣ್ಯರು ಸೇರಿದಂತೆ ಸುಮಾರು 8 ಸಾವಿರ ಅತಿಥಿಗಳು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಯ ಪ್ರಮಾಣವಚನ ಸಮಾರಂಭದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅತಿಥಿಗಳು ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.
ಪ್ರಮಾಣವಚನ ಸ್ವೀಕಾರ ಸಮಾರಂಭವು ಸುಮಾರು 90 ನಿಮಿಷಗಳ ಕಾಲ ನಡೆಯಲಿದ್ದು, ಆ ಬಳಿಕ ಬಿಮ್ಸ್ಟೆಕ್ ರಾಷ್ಟ್ರಗಳ ಪ್ರತಿನಿಧಿಗಳು ಸೇರಿದಂತೆ 40 ಜನರಿಗೆ ರಾಷ್ಟ್ರಪತಿ ಭವನದಲ್ಲಿ ಔತಣ ಕೂಟ ಏರ್ಪಡಿಸಲಾಗುವುದು ಎಂದು ರಾಷ್ಟ್ರಪತಿಭವನದ ವಕ್ತಾರ ಅಶೋಕ್ ಮಲಿಕ್ ತಿಳಿಸಿದ್ದಾರೆ.