ಮೂಡುಬಿದಿರೆ, ನ 29: ಆಳ್ವಾಸ್ ನುಡಿಸಿರಿಯಲ್ಲಿ ನೀಡುವ "ನುಡಿಸಿರಿ ಪ್ರಶಸ್ತಿ" ಯನ್ನು ಶತಾಯುಷಿ, ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ನಿರಾಕರಿಸಿದ್ದಾರೆ.ನುಡಿಸಿರಿ ಸಂಘಟಕ ಡಾ.ಎಂ.ಮೋಹನ್ ಆಳ್ವರೊಂದಿಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣವನ್ನು ನೀಡಿ, ಅವರು ಪ್ರಶಸ್ತಿಯ ಜತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ. 14ನೇ ವರ್ಷದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಇದಾಗಿದ್ದೂ ಈ ಬಾರಿಯ ನುಡಿಸಿರಿ ಡಿಸೆಂಬರ್ 1ರಿಂದ 3ರವರೆಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ . ಇತ್ತೀಚೆಗೆ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿದ್ದ ಧರ್ಮ ಸಂಸದ್ನ ಪೋಷಕ ಸಮಿತಿಯಲ್ಲಿ ಡಾ.ಮೋಹನ್ ಆಳ್ವ ಗುರುತಿಸಿಕೊಂಡಿದ್ದರು. ಆದ್ದರಿಂದ ಡಾ.ಆಳ್ವರೊಂದಿಗಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ದೊರೆಸ್ವಾಮಿ ತಿಳಿಸಿದ್ದಾರೆ. ಆದರೆ ಡಾ.ಮೋಹನ್ ಆಳ್ವ ಅವರು ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಅಪಾರ ಗೌರವವಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.