ಉಡುಪಿ,ಮೇ30(DaijiworldNews/AZM):ರಾಜ್ಯದಲ್ಲಿ ಬಿಸಿಲ ಬೇಗೆ ಏರುತ್ತಿದೆ. ಮಂಗಳೂರು ಉಡುಪಿಯಲ್ಲಂತೂ ಮಳೆನೇ ಇಲ್ಲದೆ ಜನರು ಬಿಸಿಲಬೇಗೆಗೆ ತತ್ತರಿಸಿ ಹೋಗಿದ್ದಾರೆ. ಈ ಬಿಸಿಲ ತಾಪದ ಸಮಯದಲ್ಲೇ ಮುಸ್ಲಿಂ ಬಾಂಧವರಿಗೆ ರಮ್ ಝಾನ್ ತಿಂಗಳು ಕೂಡಾ ಬಂದ ಹಿನ್ನಲೆ, ಮುಸ್ಲೀಮರಿಗೆ ಈ ಬಾರಿ ಬಹಳ ಕಠಿಣ ಉಪವಾಸ ಎದುರಾಗಿದೆ.
ಮುಂಗಾರು ವಿಳಂಬವಾಗುತ್ತಿರುವ ಹಿನ್ನಲೆ, ಬಿಸಿಲ ಧಗೆ ಹೆಚ್ಚಾಗುತ್ತಿದೆ.ಅಲ್ಲದೆ ಎಲ್ಲಾ ಕಡೆಗಳಲ್ಲೂ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುತ್ತಿದೆ. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಬಿಸಿಲ ಧಗೆ ಹೆಚ್ಚಾಗಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಗರಿಷ್ಠ ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ.
ಈಗ ಮುಸಲ್ಮಾನರ ಪವಿತ್ರ ತಿಂಗಳಾದ ರಮ್ ಝಾನ್ ತಿಂಗಳೂ ಕೂಡಾ ಆದುದರಿಂದ ಮುಸ್ಲಿಂ ಬಾಂಧವರಿಗೆ ಇದು ಅತೀ ಕಠಿಣ ಉಪವಾಸವಾಗಿ ಹೋಗಿದೆ. ಬೆಳಿಗ್ಗೆ 5 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಒಂದು ಹನಿ ನೀರು ಕೂಡಾ ಕುಡಿಯದೆ ಉಪವಾಸ ಹಿಡಿಯುವುದು ಈ ಬಿಸಿಲಿಗೆ ತುಂಬಾ ಕಷ್ಟಕರವಾಗಿ ಹೋಗಿದ್ದು, ಹಲವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿದೆ.ಹಾಗೂ ದಿನನಿತ್ಯದ ಕೆಲಸಕಾರ್ಯಗಳನ್ನು ಮಾಡಲು ಕಷ್ಠಕರವಾದ ಪರಿಸ್ಥಿತಿ ಬಂದೊದಗಿದೆ.
ಇದೇ ರೀತಿ ಏರಿಕೆಯಾಗುತ್ತಾ ಹೋದರೆ ಪ್ರಾಣಿಗಳೂ ಕೂಡ ಬದುಕುವುದು ಕಷ್ಟವಾಗುತ್ತದೆ, ನೀರಿನ ಅಭಾವವೂ ಕೂಡ ತುಂಬಾ ಕಾಡುತ್ತಿದೆ. ಬ್ರಹ್ಮಪುರಿಯಲ್ಲಿ 47.5 ಡಿಗ್ರಿ ಸೆಲ್ಸಿಯಸ್, ಅಮರಾವತಿಯಲ್ಲಿ 46.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಚಂದ್ರಾಪುರವು ವಿಶ್ವದ ನಾಲ್ಕನೇ ಬಿಸಿಲ ನಗರ ಎಂದು ಕರೆಸಿಕೊಂಡಿತ್ತು. 2018 ರಲ್ಲೂ 47.3 ಡಿಗ್ರಿ ಸೆಲ್ಸಿಯಸ್ನಷ್ಟು ಗರಿಷ್ಠ ತಾಪಮಾನ ದಾಖಲಾಗಿತ್ತು. ಇನ್ನು ಕರ್ನಾಟಕದ ಕಲಬುರಗಿಯಲ್ಲಿ 44.3 ಡಿಗ್ರಿ ಸೆಲ್ಸಿಯಸ್ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿಯಲ್ಲಿ ಬಿಸಿಲ ಧಗೆ ಹೆಚ್ಚಾಗಿರುವ ಪರಿಣಾಮ ಬೇಸಿಗೆ ರಜೆಯನ್ನೂ ಕೂಡ ಜೂನ್ 15ರವರೆಗೆ ವಿಸ್ತರಿಸಲಾಗಿದೆ.
ವಿಜಯವಾಡ, ಕರ್ನಾಟಕ, ದೆಹಲಿಯ ಕೆಲವು ಪ್ರದೇಶಗಳಲ್ಲಿ ಮಾತ್ರ ಮುಂಗಾರು ಪೂರ್ವ ಮಳೆಯಾಗಿದೆ. ಇನ್ನುಳಿದ ಕಡೆಗಳಲ್ಲಿ ಬಿಸಿಲ ಧಗೆ ಮುಂದುವರೆದು ಜನರ ಜೀವಕ್ಕೆ ಕುತ್ತು ತಂದಿದೆ.