ಮಂಗಳೂರು, ಮೇ 30 (Daijiworld News/MSP): ಮಂಗಳೂರಿನ ಹೊರವಲಯದಲ್ಲಿ ನಟೋರಿಯಸ್ ರೌಡಿ ಉಮರ್ ಫಾರುಕ್ ಮೇಲೆ ಪೊಲೀಸರು ನಡೆಸಿದ ಶೂಟೌಟ್ ನ ಮತ್ತೊಂದು ಮುಖ ಬಯಲಾಗಿದೆ. ಕಿಮಿನಲ್ಸ್ ಮಾಡಿದ ಮಾಸ್ಟರ್ ಪ್ಲ್ಯಾನ್ ನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದೇ ತಡ ಅವರನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ.
ಟಾರ್ಗೆಟ್ ಗ್ರೂಪ್ ಬಲಿಷ್ಟಗೊಳಿಸುವ ಯತ್ನ
ಉಮ್ಮರ್ ಫಾರೂಕ್ ಟಾರ್ಗೆಟ್ ಗ್ರೂಪಿನ ದಿ| ಇಲಿಯಾಸ್ನ ಭಾವನಾಗಿದ್ದಾನೆ. 2018ರಲ್ಲಿ ಇಲಿಯಾಸ್ ಕೊಲೆಯಾದ ಬಳಿಕ ಟಾರ್ಗೆಟ್ ಗ್ರೂಪ್ ಹೆಚ್ಚು ಸಕ್ರಿಯವಾಗಿರಲಿಲ್ಲ. ಆ ಗ್ರೂಪನ್ನು ಮತ್ತೆ ಸಂಘಟಿಸಲು ಉಮ್ಮರ್ ಯತ್ನಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಇಲಿಯಾಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಸಮೀರ್ನನ್ನು ಕೊಲ್ಲಲು ಉಮ್ಮರ್ ತನ್ನ ಸಹಚರ ಸುರ್ಮಾ ಇಮ್ರಾನ್ ಹಾಗೂ ಇತರರ ಜತೆಗೂಡಿ ಸಂಚುರೂಪಿಸಿದ್ದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದು ಮಾತ್ರವಲ್ಲದೆ ಎಂ.ಎ ಹಸನ್ ಬಾವ ಎಂಬವರಿಂದ ಹಣ ವಸೂಲಿ ಮಾಡಿರುವ ಬಗ್ಗೆ ಎರಡು ವಾರಗಳ ಹಿಂದೆ ಉಮ್ಮರ್ ವಿರುದ್ದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣಗಳಿಗೆ ಸಂಬಂಧಿಸಿ ಆತನನ್ನು ಬಂಧಿಸಲು ತೆರಳಿತ್ತು.
ಉಮ್ಮರ್ ಫಾರೂಕ್ ಮೇಲಿದೆ 9 ಪ್ರಕರಣಗಳು
ಉಮ್ಮರ್ ಫಾರೂಕ್ ಹಳೆ ಆರೋಪಿಯಾಗಿದ್ದು, ಆತನ ಮೇಲೆ ಈ ಹಿಂದೆ 9 ಪ್ರಕರಣಗಳು ದಾಖಲಾಗಿವೆ. ಟಾರ್ಗೆಟ್ ಗ್ರೂಪ್ನಲ್ಲಿ ಗುರುತಿಸಿಕೊಂಡಿದ್ದ ಆತ ಜನರನ್ನು ಹೆದರಿಸುವುದು, ಸುಲಿಗೆ ಮಾಡುವುದು ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿದ್ದ. ಆತನ ಮೇಲೆ ಕಠಿನ ಕಾನೂನು ಕ್ರಮ ಜರಗಿಸಲಾಗುವುದು. ಈ ನಿಟ್ಟಿ ನಲ್ಲಿ ತನಿಖೆ ಮುಂದುವರಿದಿದೆ.
ಒಂದು ವೇಳೆ ಉಮ್ಮರ್ ಫಾರೂಕ್ ಮೇಲೆ ಪೊಲೀಸರು ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ಮತ್ತೆ ಮಂಗಳೂರಿನಲ್ಲಿ ಟಾರ್ಗೆಟ್ ಗ್ರೂಪ್ ಅಟ್ಟಹಾಸ ಮರೆಯುತ್ತಿತ್ತು, ಅಲ್ಲದೆ ಮುಂದಾಗುವ ರಕ್ತಪಾತವನ್ನು ಅಲ್ಲಗಳೆಯುವಂತಿಲ್ಲ. ಆದರೆ ಉಮ್ಮರ್ ಫಾರೂಕ್ ಮಾಡಿದ ಮಾಸ್ಟರ್ ಪ್ಲ್ಯಾನ್ ಭೇದಿಸಿದ ಪೊಲೀಸರು ಆತನಿಗೆ ಗುಂಡೇಟಿನ ರುಚಿ ತೋರಿಸಿದ್ದಾರೆ.