ಸುಬ್ರಹ್ಮಣ್ಯ, ಮೇ 30 (Daijiworld News/MSP): ಅದು ಸಾಕಾನೆಯಲ್ಲ, ಆದರೂ ಸ್ಥಳೀಯರ ಪ್ರೀತಿಯನ್ನು ಗೆದ್ದಿತ್ತು. ನೋವಿನಿಂದ ನರಳುತ್ತಿರುವ ಕಾಡಾನೆಯ ಸಂಕಟ ನೋಡಲಾಗದೆ ಸ್ಥಳೀಯರು ಕಾಡಿಗೆ ತೆರಳಿ ಆಹಾರ ನೀಡುತ್ತಿದ್ದರು. ಆದರೆ ಆಹಾರ ನೀಡುತ್ತಿರುವುದರಿಂದಲೇ ಕಾಡಾನೆ ಕಾಡಿಗೆ ತೆರಳುತ್ತಿಲ್ಲ ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ ಎಂದು ಅರಣ್ಯ ಇಲಾಖೆ ಸೂಚಿಸಿದ್ದರಿಂದ ಆಹಾರವನ್ನು ಸ್ಥಗಿತಗೊಳಿಸಿದ್ದರು. ಆದರೆ ಗಾಯ ಗುಣವಾಗಲಿಲ್ಲ, ಆಹಾರ ಸಿಗಲಿಲ್ಲ , ಆನೆ ಬದುಕಲಿಲ್ಲ..ಆನೆಯೊಂದಿಗೆ ಭಾವನಾತ್ಮಕ ನಂಟು ಬೆಳೆಸಿಕೊಂಡಿದ್ದ ಸ್ಥಳೀಯರು ಮಾತ್ರ ಒಂಟಿಸಲಗದ ಸಾವಿಗೆ ಕಣ್ಣೀರು ಸುರಿಸುತ್ತಿದ್ದಾರೆ.
ಹೌದು ನೋವಿನಿಂದ ನರಳುತ್ತಿದ್ದ ಕಾಡಾನೆ ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಆನೆ ಸಾವನ್ನಪ್ಪಿದೆ. 16 ವರ್ಷದ ಒಂಟಿಸಲಗ ಬುಧವಾರ ಏಲಕ್ಕಿತೋಟ ಎಂಬಲ್ಲಿ ಸಾವನ್ನಪ್ಪಿದೆ. ಏ.7 ರಂದು ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಮೀಸಲು ಅರಣ್ಯದಲ್ಲಿ ಕಾಡಾನೆಯೊಂದು ಗಾಯಗೊಂಡು ನರಳಾಡುತ್ತಿರುವುದನ್ನು ಕಂಡು ಇಲಾಖೆಗೆ ಮಾಹಿತಿ ನೀಡಿದ್ದರು. ಎರಡು ದಿನಗಳ ಬಳಿಕ ಇಲಾಖೆ ಚಿಕಿತ್ಸೆ ನೀಡಿ ಕೈತೊಳೆದುಕೊಂಡಿತ್ತು. ಆದರೂ ಗಾಯ ವಾಸಿಯಾಗಿರಲಿಲ್ಲ. ಇದೇ ಸಂದರ್ಭ ಬೇರೆಂದು ಆನೆಯ ತಿವಿತಕ್ಕೆ ಒಳಗಾಗಿ ಆನೆ ಮತ್ತೆ ಜರ್ಝರಿತವಾಗಿತ್ತು. ಹೀಗಾಗಿ ತೀರಾ ನಿತ್ರಾಣಗೊಂಡಿದ್ದ ಆನೆ ಕಾಡಿಗೆ ಮರಳದೆ ಅಲ್ಲೇ ಸುತ್ತಾಡುತ್ತಿದ್ದು. ಇದನ್ನು ಗಮನಿಸಿ ಸ್ಥಳೀಯರು ನಿತ್ಯ ಆಹಾರ ನೀಡುತ್ತಿದ್ದರು. ಆದರೆ ಇಲಾಖೆ ಆಹಾರ ನೀಡದಂತೆ ಸೂಚಿಸಿತ್ತು. ಆದರೆ ದಿನನಿತ್ಯ ಆನೆಯ ಚಲನವಲನ ಗಮನಿಸುತ್ತಿದ್ದ ಸ್ಥಳೀಯರಿಗೆ ಆನೆ ಕಾಣದಾದಗ ಕಾಡಿನ ಏಲಕ್ಕಿ ತೋಟ ಎಂಬ ಪ್ರದೇಶದಲ್ಲಿ ಆನೆ ಪ್ರಾಣ ಕಳೆದುಕೊಂಡಿರುವುದು ಪತ್ತೆಯಾಗಿದೆ.
ಗಾಯಾಳ ಆನೆ ಮೇಲೆ ಸ್ಥಳೀಯರಿಗೆ ಪ್ರೀತಿ ಕಾಳಜಿ ಮೂಡಿದ್ದು, ಆನೆ ಗುಣಮುಖವಾಗುವಂತೆ ಚಾಮುಂಡಿ ದೇವಿಗೆ ಅಯ್ಯಪ್ಪನಿಗೆ ಹರಕೆ ಹೊತ್ತಿದ್ದರು. ಮಂಗಳವಾರ ಜೀವಂತವಾಗಿದ್ದ ಆನೆ ಬುಧವಾರ ಸಾವಿಗೀಡಾಗಿರುವುದನ್ನು ಕಂಡು ಅಗಲಿಕೆಯ ನೋವು ಸಹಿಲಾಗದೆ ಕಣ್ಣೀರಿಟ್ಟರು.
ಅರಣ್ಯ ಇಲಾಖೆಯ ನಿರ್ಲಕ್ಷದಿಂದಲೇ ಈ ಘಟನೆ ಸಂಭವಿಸಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡಲಾರಂಭಿಸಿದ್ದಾರೆ. ಅಲ್ಲದೆ ಬುಧವಾರ ತಡರಾತ್ರಿ ಇಲಾಖೆ ಅಧಿಕಾರಿಗಳು ತರಾರುರಿಯಲ್ಲಿ ಮಹಜರಿನ ನಿರ್ಧಾರದ ಬಗ್ಗೆ ಸ್ಥಳೀಯರಲ್ಲಿ ನಾನಾ ಸಂಶಯ ಹುಟ್ಟುಹಾಕಿದೆ.