ಮಂಗಳೂರು, ಮೇ.30(Daijiworld News/AZM): ಭಾರತ ದೇಶದ 14ನೇ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುವ ಪ್ರಯುಕ್ತ ಮೂಡಬಿದ್ರೆ - ಕಿನ್ನಿಗೋಳಿ - ಹಳೆಯಂಗಡಿ - ಸುರತ್ಕಲ್ - ಮಂಗಳೂರಿಗೆ ಸಂಚರಿಸುವ ಕೋಟ್ಯಾನ್ ಹೆಸರಿನ ಬಸ್ ಉಚಿತ ಸೇವೆಯನ್ನು ಪ್ರಯಾಣಿಕರಿಗೆ ನೀಡಲಿದೆ ಎಂದು ಬಸ್ಸಿನ ಚಾಲಕರು ತಿಳಿಸಿದ್ದಾರೆ.
ಭಾರತದ ಪ್ರಜೆಗಳು ಪ್ರಧಾನಿ ಮೋದಿಗೆ ಮತ್ತೇ ಎರಡನೇ ಬಾರಿ ಪ್ರಧಾನಮಂತ್ರಿಯಾಗಲು ಬಹುಮತ ನೀಡಿದ್ದು, ಇಂದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನೆಲೆ ಮಂಗಳೂರಿನಲ್ಲಿ ಮೋದಿ ಅಭಿಮಾನಿಗಳು ವಿಶೇಷ ಅಭಿಮಾನವನ್ನು ತೋರ್ಪಡಿಸಿದ್ದಾರೆ. ಬಸ್ ಸೇರಿದಂತೆ ಫೋಟೋ ಸ್ಟುಡಿಯೋ(ಪುನಿಕ್), ಜಿಮ್ಮಿನಲ್ಲಿ ಉಚಿತ ಸೇವೆ ಮಾಡುವ ಮೂಲಕ ಮೋದಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಬಿಜೆಪಿಗೆ ಭಾರಿ ಗೆಲುವು ತಂದುಕೊಟ್ಟ ನರೇಂದ್ರ ಮೋದಿ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಗುರುವಾರ ಸಂಜೆ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಮ್ಸ್ಟೆಕ್ ರಾಷ್ಟ್ರಗಳ ಪ್ರತಿನಿಧಿಗಳು, ಅತಿಗಣ್ಯರು ಸೇರಿದಂತೆ ಸುಮಾರು 8 ಸಾವಿರ ಅತಿಥಿಗಳು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಯ ಪ್ರಮಾಣವಚನ ಸಮಾರಂಭದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅತಿಥಿಗಳು ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.
ಪ್ರಮಾಣವಚನ ಸ್ವೀಕಾರ ಸಮಾರಂಭವು ಸುಮಾರು 90 ನಿಮಿಷಗಳ ಕಾಲ ನಡೆಯಲಿದ್ದು, ಆ ಬಳಿಕ ಬಿಮ್ಸ್ಟೆಕ್ ರಾಷ್ಟ್ರಗಳ ಪ್ರತಿನಿಧಿಗಳು ಸೇರಿದಂತೆ 40 ಜನರಿಗೆ ರಾಷ್ಟ್ರಪತಿ ಭವನದಲ್ಲಿ ಔತಣ ಕೂಟ ಏರ್ಪಡಿಸಲಾಗುವುದು ಎಂದು ರಾಷ್ಟ್ರಪತಿಭವನದ ವಕ್ತಾರ ಅಶೋಕ್ ಮಲಿಕ್ ತಿಳಿಸಿದ್ದಾರೆ.