ಮಂಗಳೂರು, ಮೇ29(Daijiworld News/SS): ಕಳೆದ ಕೆಲ ದಿನಗಳ ಹಿಂದೆ ಬೋಳಾರ ಬದಿಯ ನೇತ್ರಾವತಿ ನದಿ ದಡದಲ್ಲಿ ಮಗುವಿನ ಮೃತದೇಹವೊಂದು ಪತ್ತೆಯಾಗಿದ್ದು, ಕೊಲೆಗೈದು ಬಿಸಾಡಿರುವ ಶಂಕೆ ವ್ಯಕ್ತವಾಗಿತ್ತು.
ಕೊಪ್ಪಳ ಮೂಲದ ಹಾಗೂ ಪ್ರಸ್ತುತ ಬೋಳಾರ ನಿವಾಸಿ ಲಕ್ಷ್ಮಣ ತೆಂಗಿನಹಾಳ ಮತ್ತು ರೂಪಾ ಅವರ ಪುತ್ರಿ ಮೌನಶ್ರೀ ( 8 ತಿಂಗಳು) ಮೃತಪಟ್ಟ ಮಗು.
ನದಿ ದಡದಲ್ಲಿ ಪತ್ತೆಯಾದ ಮಗುವಿನ ಹಣೆಯ ಎರಡೂ ಬದಿ ತರಚಿದ ಗಾಯ, ಮೂಗಿನ ಬದಿ ಉಗುರಿನ ಗಾಯದ ಗುರುತುಗಳಿರುವುದು ಕಂಡುಬಂದಿತ್ತು. ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಇದೀಗ ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸ್ ನಿರೀಕ್ಷಕರು ಕೊಲೆಯಾದ ಮಗುವಿನ ತಂದೆ ಲಕ್ಷ್ಮಣ ತೆಮ್ಮಿನಾಳ ಅವರನ್ನು ವಿಚಾರಣೆ ನಡೆಸಿದ್ದು, ಈ ಕೊಲೆ ಕೃತ್ಯವನ್ನು ತಾನೇ ನಡೆಸಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಆರೋಪಿಗೆ ಎರಡೂ ಮಂದಿಯೂ ಹೆಣ್ಣು ಮಕ್ಕಳಾಗಿದ್ದು, ಇದರಿಂದ ಈ ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಹೊಂದಿ, ಮಗುವನ್ನು ಉಸಿರುಗಟ್ಟಿಸಿ ಕೊಲೆ ನಡೆಸಿ ನೇತ್ರಾವತಿ ನದಿ ನೀರಿಗೆ ಎಸೆದಿರುವುದು ತನಿಖೆ ವೇಳೆ ಬಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಬೋಳಾರದಲ್ಲಿರುವ ಎಂಫಾರ್ ಕ್ಯಾಂಪ್ನ ತಾತ್ಕಾಲಿಕ ಶೆಡ್ನಲ್ಲಿ ಈ ಕುಟುಂಬ ಹಲವು ಸಮಯದಿಂದ ವಾಸವಾಗಿದ್ದರು. ಆರೋಪಿ ಲಕ್ಷ್ಮಣ ಅವರು ಮಂಗಳೂರಿನ ಕಟ್ಟಡವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.