ಬೆಳ್ತಂಗಡಿ, ಮೇ 29 (Daijiworld News/SM): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡೂರಿನಲ್ಲಿ ನಡೆದ ಶಿಕ್ಷಕ ವಿಕ್ರಂ ಜೈನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಪುಂಜಾಲಕಟ್ಟೆಯ ಮಾಲಾಡಿ ನಿವಾಸಿ ಗಣೇಶ್ ಪೂಜಾರಿ(34) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾಗೇಶ್ ಮತ್ತು ಡೀಕಯ್ಯ ಎಂಬವರನ್ನು ಬಂಧಿಸಲಾಗಿದೆ.
ಮೇ 27ರ ರಾತ್ರಿ ಪ್ರಕರಣದಲ್ಲಿ ಕೊಲೆಯಾದ ವಿಕ್ರಂ ಜೈನ್ ಎಂಬವರಿಗೆ ಮೊಬೈಲ್ ಕರೆ ಮಾಡಿ ನಿಮ್ಮ ಬಳಿ ಮಾತನಾಡಲಿದೆ, ಮುಂಡೂರಿನ ಕೋಟಿಕಟ್ಟೆ ಬಳಿ ಬನ್ನಿ ಎಂಬುದಾಗಿ ತಿಳಿಸಿದ್ದು, ರಾತ್ರಿ 11:30 ಗಂಟೆ ಸಮಯಕ್ಕೆ ತನ್ನ ಕಾರಿನಲ್ಲಿ ವಿಕ್ರಂ ಜೈನ್ ಗುರುವಾಯನಕೆರೆ ಪೇಟೆಯಲ್ಲಿರುವ ಬಾರ್ವೊಂದರಲ್ಲಿ ಮದ್ಯ ಸೇವನೆ ಮಾಡಿ ಕೋಟಿಕಟ್ಟೆಗೆ ಬಂದಿದ್ದರು. ಈ ಸಂದರ್ಭ ಆರೋಪಿಗಳು ವಿಕ್ರಂ ಜೈನ್ ರವರ ಬಳಿ ಜಾಗದ ವಿಚಾರದಲ್ಲಿ ಹಾಗೂ ಹೆಣ್ಣಿನ ವಿಚಾರದಲ್ಲಿ ಚರ್ಚೆ ಮಾಡಿ ಗಲಾಟೆ ಮಾಡಿ ಬಳಿಕ ಹೊಟ್ಟೆಗೆ ಚಾಕುವಿನಿಂದ ತಿವಿದು ಮುಖದ ಭಾಗಕ್ಕೆ ತಲವಾರಿನಿಂದ ಕಡಿದು ಕೊಲೆ ಮಾಡಿರುತ್ತಾರೆ.
ನಂತರ ಆರೋಪಿ ನಾಗೇಶನು ಮಾಲಾಡಿ ಊರ್ಲ ಎಂಬಲ್ಲಿರುವ ತನ್ನ ಅಣ್ಣ ಗಣೇಶ್ ಪೂಜಾರಿಗೆ ಕರೆ ಮಾಡಿ ನಾವು ನಿನ್ನಲ್ಲಿಗೆ ಬರುತ್ತಿರುವುದಾಗಿ ತಿಳಿಸಿ ದ್ವಿಚಕ್ರ ವಾಹನದಲ್ಲಿ ಗಣೇಶ್ ಪೂಜಾರಿ ಮನೆಗೆ ತೆರಳಿದ್ದಾರೆ. ಅಲ್ಲಿಂದ ಬೆಳಗ್ಗೆ ಆರೋಪಿಗಳು ಮಂಗಳೂರಿಗೆ ತೆರಳಿ ರೈಲಿನ ಮೂಲಕ ಮುಂಬಾಯಿಗೆ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬೈಂದೂರು ರೈಲ್ವೇ ಸ್ಟೇಷನ್ನಲ್ಲಿ ರೈಲು ನಿಂತಾಗ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಗೆ ಆಶ್ರಯ ನೀಡಿದ ನಾಗೇಶ್ ಪೂಜಾರಿಯಸಹೋದರ ಗಣೇಶ್ ಪೂಜಾರಿ ಇದೀಗ ಪೊಲೀಸರು ಬಂಧಿಸಿದ್ದಾರೆ.