ಬೆಳ್ತಂಗಡಿ, ಮೇ29(Daijiworld News/SS): ಇತಿಹಾಸ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ತಲೆದೋರಿದ್ದ ನೀರಿನ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದೆ ನೇತ್ರಾವತಿ ನದಿಯಲ್ಲಿ ನೀರಿನ ಅಭಾವ ತಲೆದೋರಿರುವ ಕಾರಣಕ್ಕೆ ಭಕ್ತಾದಿಗಳು ಧರ್ಮಸ್ಥಳ ಪ್ರವಾಸವನ್ನು ಮುಂದೂಡಬೇಕು ಎಂದು ಮನವಿ ಮಾಡಿ ವೀರೇಂದ್ರ ಹೆಗ್ಗಡೆ ಅವರು ಪತ್ರ ಬರೆದಿದ್ದರು. ಈ ಪತ್ರ ಮಾಧ್ಯಮಗಳಲ್ಲಿ ವರದಿಯಾದ ಕೂಡಲೇ ಎಚ್ಚೆತ್ತ ಕುಮಾರಸ್ವಾಮಿ ಅವರು ವಿಶೇಷ ಮುತುವರ್ಜಿ ವಹಿಸಿ, ಕೂಡಲೇ ಮುಖ್ಯಕಾರ್ಯದರ್ಶಿ ಅವರ ಮೂಲಕ ನೀರಿನ ಸಮಸ್ಯೆ ಪರಿಹಾರ ಕಾರ್ಯಕ್ಕೆ ಸ್ಪಂದಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಸಿಎಂ ಎಚ್ಡಿಕೆ ಅವರಿಗೆ ಪತ್ರ ಬರೆದಿರುವ ಹೆಗ್ಗಡೆ, ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಎಚ್ಡಿಕೆಯ ಅವರ ದಕ್ಷ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ನಡೆಯಲೆಂದು ಮಂಜುನಾಥ;ಹಾರೈಸಲೆಂದು ಕೋರುವುದಾಗಿ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಕಂಡು ಬಂದ ತಕ್ಷಣ ನಿಮ್ಮ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ, ಕರ್ನಾಟಕ ಜನ ಮಂಡಳಿ ಮತ್ತು ಸಣ್ಣ ನೀರಾವರಿ ಯೋಜನೆಯ ಅಧಿಕಾರಿಗಳು ಧರ್ಮಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಗಮನಿಸಿ ನನ್ನೊಂದಿಗೆ ಮಾತನಾಡಿ ಸರಕಾರಕ್ಕೆ ವರದಿ ನೀಡಿರುತ್ತಾರೆ. ನಮ್ಮ ಕೋರಿಕೆಯನ್ನು ಮನ್ನಿಸಿ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ನೀವು ನೇತ್ರಾವತಿ ನದಿ ಮತ್ತು ನೆರಿಯ ನದಿಗೆ 2 ಕಿಂಡಿ ಅಣೆಕಟ್ಟು ನಿರ್ಮಿಸಲು 7 ಕೋಟಿಯನ್ನು ಮಂಜೂರು ಮಾಡಿ ಅಧಿಕಾರಿಗಳಿಗೆ ಆದೇಶ ನೀಡಿರುವುದು ಸಂತೋಷವಾಗಿದೆ. ನಿಮ್ಮ ಕಾಳಜಿಗೆ ನಮ್ಮ ಕ್ಷೇತ್ರದ ವತಿಯಿಂದ ಹಾಗೂ ಎಲ್ಲ ಭಕ್ತಾದಿಗಳ ಪರವಾಗಿ ಕೃತಜ್ಞತೆಗಳು. ಮಂಜುನಾಥ ಸ್ವಾಮಿ ನಿಮಗೆ ದೀರ್ಘಾಯುರಾರೋಗ್ಯವನ್ನಿತ್ತು, ನಿಮ್ಮ ದಕ್ಷ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸುವಂತೆ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಪತ್ರ ಬರೆದಿದ್ದಾರೆ.