ಸುಳ್ಯ, ಮೇ 29 (Daijiworld News/SM): ಮದೆನಾಡು ಗ್ರಾಮದ ಗೋಳಿಕಟ್ಟೆಯಲ್ಲಿ ನಿರಾಶ್ರಿತರಾಗಿ ನಿರ್ಮಿಸಲು ಉದ್ದೇಶಿತ 80 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಅರ್ಹ ಫಾಲಾನುಭವಿಗಳಿಗೆ ಹಸ್ತಾಂತರ ಕೆಲಸ ನಡೆಯಲಿದೆ ಎಂದು ಕೊಡಗು ಜಿಲ್ಲಾಡಳಿತ ತಿಳಿಸಿದೆ.
ಇದೀಗ ಕೊಡಗಿನ ವಾಸ ಯೋಗ್ಯವಾದ ಭೂಮಿ ಎನ್ನಲಾದ 5 ಕಡೆ ನಿರಾಶ್ರಿತರಿಗೆ ಮನೆ ನಿರ್ಮಾಣ ಕೆಲಸ ನಡೆಸಲಾಗುತ್ತಿದೆ. ಮನೆ ನಿರ್ಮಾಣಕ್ಕೆ ಮೊದಲು ಜಿಲ್ಲಾಡಳಿತದವರು ನಿರಾಶ್ರಿತರಿಗೆ ಯಾವ ಭಾಗದಲ್ಲಿ ಮನೆ ಬೇಕೆಂದು ಕೇಳಿಕೊಂಡು ಬರೆದುಕೊಂಡಿತು. ಇದೀಗ ಮನೆ ಬೇಡಿಕೆ ಪಟ್ಟಿಗಳನ್ನು ಬೇಡಿಕೆಗೆ ಅನುಗುಣವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೆ ಮೂಲಭೂತ ವ್ಯವಸ್ಥೆಗಳಾದ ನೀರು, ರಸ್ತೆ, ವಿದ್ಯುತ್, ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಆರಂಭವಾಗುವುದರಿಂದ ಮುಂಗಾರು ಮಳೆ ಪ್ರವೇಶ ಆಗುವುದರ ಮೊದಲು ಹಂತ ಹಂತವಾಗಿ ಪ್ರಥಮ ಪಟ್ಟಿಯಲ್ಲಿರುವರಿಗೆ ಮನೆ ಹಸ್ತಾಂತರ ಕೆಲಸ ನಡೆಯಲಿದೆ. ನಂತರ ಎರಡನೇ ಪಟ್ಟಿಯಲ್ಲಿರುವವರಿಗೆ ಮನೆ ಹಸ್ತಾಂತರ ನಡೆಯಲಿದೆ ಎಂದು ತಿಳಿದು ಬಂದಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊಡಗು ಹಾಗೂ ಸುಳ್ಯ ತಾಲೂಕಿನ ನೆರೆಯ ಊರಾದ ಜೋಡುಪಾಲ ಹಾಗೂ ಎರಡನೇ ಮೊಣ್ಣಂಗೇರಿ ಸಂಭವಿಸಿದ ಜಲಪ್ರಳಯದಿಂದ ಅನೇಕರು ತಮ್ಮ ತಮ್ಮ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು.ಬಳಿಕ ಜೋಡುಪಾಲ ಹಾಗೂ ಎರಡನೇ ಮೊಣ್ಣಂಗೇರಿ ಭಾಗದವರಿಗೆ ಸುಳ್ಯ ತಾಲೂಕಿನ ಕಲ್ಲುಗುಂಡಿ, ಅರಂತೋಡು, ಕೊಡಗಿನ ಸಂಪಾಜೆ ಭಾಗದಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿತ್ತು. ಅರ್ಹ ನಿರಾಶ್ರಿತರಿಗೆ ಮನೆ ಬಾಡಿ ರೂ.10,000 ನೀಡಿ ಮಳೆಯ ತೀವ್ರತೆ ಕಡಿಮೆಯಾದ ಬಳಿಕ ಪರಿಹಾರ ಕೇಂದ್ರವನ್ನು ಮುಚ್ಚಲಾಯಿತು. ಇದೀಗ ಕಲ್ಲುಗುಂಡಿ ಪ್ರಾಥಮಿಕ ಶಾಲೆಯಲ್ಲಿ ೨೦ ಮಂದಿ ನಿರಾಶ್ರಿತರು ವಾಸವಾಗಿದ್ದಾರೆ.