ಮಂಗಳೂರು, ಮೇ29(Daijiworld News/SS): ರಾ.ಹೆ 66ರ ತೊಕ್ಕೊಟ್ಟು ಫ್ಲೈ ಓವರ್ ಜೂ.10ರಂದು ಸಂಚಾರ ಮುಕ್ತವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಕಳೆದ ಎಂಟು ವರುಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಕಾಮಗಾರಿ ಪರಿಶೀಲಿಸಿದ ಸಂಸದ ನಳಿನ್ ಅವರು ಜೂನ್.10 ರಂದು ಸಂಚಾರಕ್ಕೆ ಮುಕ್ತವಾಗಲಿದೆ. ಕಾಮಗಾರಿಯು 98% ಪೂರ್ತಿಗೊಂಡಿದ್ದು ಮುಂದಿನ ವಾರವೇ ಸಂಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಉಳ್ಳಾಲಕ್ಕೆ ತೆರಳುವ ವಾಹನಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ ಅವರು, ಮೇಲ್ಸೇತುವೆ ಕಾಮಗಾರಿ ಸಂಪೂರ್ಣಗೊಂಡತೆಯೇ ಸರ್ವಿಸ್ ರಸ್ತೆಗಳ ಅಗಲೀಕರಣ ನಡೆಸಿ ಇತರ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ತಾ.ಪಂ ಸದಸ್ಯ ರವಿಶಂಕರ್, ಮುಖಂಡರಾದ ಚಂದ್ರಹಾಸ್ ಪಂಡಿತ್ ಹೌಸ್, ಸಂಜೀವ ಶೆಟ್ಟಿ ಅಂಬ್ಲಮೊಗರು, ರಾಜೀವಿ ಕೆಂಪು ಮಣ್ಣು, ಭಾರತಿ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.