ಬ್ರಹ್ಮಾವರ, ಮೇ 29(Daijiworld News/MSP): ಸಹೋದರಾರದ ಸಂದೀಪ್ ಪೂಜಾರಿ , ಪ್ರದೀಪ್ ಪೂಜಾರಿಯ ಪ್ರೀತಿಯ ತಮ್ಮ ಸುದೀಪ್ ಪೂಜಾರಿ..ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಮೇ 27ರ ಸೋಮವಾರ ಅಪರಾಹ್ನ 1 ಗಂಟೆಗೆ ರಸ್ತೆ ಅಪಘಾತದಲ್ಲಿ ಸುದೀಪ್ ಪೂಜಾರಿ ಗಂಭೀರ ಗಾಯಗೊಂಡು ಅವರನ್ನು ನಗರದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವ ಚಿಕಿತ್ಸೆಗೂ ಸ್ಪಂದಿಸದೇ ಬ್ರೈನ್ ಡೆಡ್ ಸ್ಥಿತಿಗೆ ಜಾರಿದರು. ಕಸ್ತೂರ್ಬಾ ಆಸ್ಪತ್ರೆ ವೈದ್ಯರು ಬದುಕುಳಿಯುವ ಸಾಧ್ಯತೆ ಇಲ್ಲ. ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಮನೆಯವರಿಗೆ ಮನವರಿಕೆ ಮಾಡಿದರು.
ಮುದ್ದಿನ ತಮ್ಮನ್ನು ಕಳೆದುಕೊಂಡ ಸಾವಿನ ದುಃಖದ ನಡುವೆಯೂ ಸಹೋದರರು, ಅಂಗಾಂಗ ದಾನಕ್ಕೆ ಅನುಮತಿ ನೀಡುವ ಮೂಲಕ ಮಾನವೀಯ ಗುಣ ಮೆರೆದಿದ್ದಾರೆ. ತಮ್ಮನ ಸಾವು ಎಂಟು ಜನರ ಪ್ರಾಣ ಉಳಿಸಲು ನೆರವಾಗುವುದಾದರೆ ಆಗಲಿ ಎಂದು ಮಾನವಿಯ ಕಳಕಳಿ ಮೆರೆದಿದ್ದಾರೆ.
ಸುದೀಪ್ ಪೂಜಾರಿ ಅವರ ಎರಡು ಕಾರ್ನಿಯ, ಎರಡು ಮೂತ್ರಪಿಂಡಗಳು, ಯಕೃತ್ತು (ಲಿವರ್), ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಸ್), ಹೃದಯ ಮತ್ತು ಶ್ವಾಸಕೋಶ ಎಂಟು ಜನರ ಬದುಕನ್ನು ಉಳಿಸಲು ಸಹಾಯ ಮಾಡಿತು.
ಎರಡು ಕಾರ್ನಿಯ (ಕಣ್ಣು) ಮತ್ತು ಎರಡು ಕಿಡ್ನಿ (ಮೂತ್ರಪಿಂಡ) ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರೋಗಿಗಳಿಗೆ, ಯಕೃತ್ತು ಮತ್ತು ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ರೋಗಿಗಳಿಗೆ, ಹೃದಯ ಕವಾಟ (ಹಾರ್ಟ್ ವಾಲ್ವ್) ಮತ್ತು ಶ್ವಾಸಕೋಶ ಚೆನ್ನೈನ ಬಿಜಿಎಸ್ ಆಸ್ಪತ್ರೆಯ ರೋಗಿಗಳಿಗೆ ನೀಡಿ ಜೀವದಾನ ಮಾಡಲಾಗಿದೆ.
ಮೃತ ಸುದೀಪ್ ಪೂಜಾರಿಯವರ ಅಣ್ಣಂದಿರಾದ ಸಂದೀಪ್ ಪೂಜಾರಿ ಮತ್ತು ಪ್ರದೀಪ್ ಪೂಜಾರಿ ಅವರು "ಅಂಗದಾನ ಒಂದು ಪುಣ್ಯದ ಕೆಲಸ. ನಮ್ಮ ಸಹೋದರ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ" ಎಂದು ತಿಳಿಸಿದ್ದಾರೆ. ದಾನ ಪಡೆಅದ ಅಂಗಗಳನ್ನು ಹಸಿರು ಪಥದಲ್ಲಿ (ಗ್ರೀನ್ ಕಾರಿಡಾರ್) ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಉಡುಪಿಯ ಪೊಲೀಸ್ ಇಲಾಖೆಯವರ ಸಹಯೋಗದೊಂದಿಗೆ ಮೇ 29 ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿಗೆ ವರ್ಗಾಯಿಸಲಾಗಿದೆ.
ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ "ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು" ಎಂದು ತಿಳಿಸಿದ್ದಾರೆ