ಕಾಸರಗೋಡು,ಮೇ 29(Daijiworld News/MSP): ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಮೇ 30 ರಂದು ಕೇರಳಾದ್ಯಂತ ಕಪ್ಪು ದಿನ ಅಚರಣೆಗೆ ಕೇರಳದ ಜಮಾತೆ ಕೌನ್ಸಿಲ್ ಎನ್ನವ ಸಂಘಟನೆ ಸಾಮಾಜಿಕ ಜಾಲತಾಣದ ಮೂಲಕ ಕರೆ ನೀಡಿದೆ.
ವಿದ್ಯುನ್ಮಾನ ಮತ ಯಂತ್ರ (ಇವಿಎಂ) ವಿರುದ್ದವೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಘಟನೆ ಕಿಡಿಕಾರಿದ್ದು, ಇವಿಎಂ ಮತದಾನ ವ್ಯವಸ್ಥೆ ಭ್ರಷ್ಟಾಚಾರದಿಂದ ಕೂಡಿದೆ. ಹಿಂದಿನಿಂದ ಬ್ಯಾಲೆಟ್ ಪೇಪರ್ ಮೂಲಕ ಮತದಾನ ವ್ಯವಸ್ಥೆ ಮತ್ತೆ ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದೆ.
ಎನ್ಐಎ ಸಹಿತ ಕೇಂದ್ರದ ತನಿಖಾ ಏಜನ್ಸಿಗಳು ಹಾಗೂ ಗುಪ್ತಚರ ವಿಭಾಗ ಈ ಸಂಘಟನೆಯ ಚಟುವಟಿಕೆ ಮೇಲೆ ಕಣ್ಣಿಟ್ಟಿದೆ. ಕೇರಳದಲ್ಲಿ ಈ ಸಂಘಟನೆಯ ಬಲ ಎಷ್ಟು ಸಂಘಟನೆ ಪದಾಧಿಕಾರಿಗಳ ವಿದೇಶಿ ನಂಟು , ಆರ್ಥಿಕ ಮೂಲ , ಸಂಘಟನೆ ಹಿಂದೆ ಯಾರ ಕೈವಾಡ ಇದೆ, ಇತರ ರಾಜ್ಯಗಳಲ್ಲಿ ಇವರ ಶಕ್ತಿ ಏನು ಮೊದಲಾದ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.