ಮಂಗಳೂರು ನ 28: ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ವೈಫಲ್ಯಗಳ ವಿರುದ್ದ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಡಿ 9 ರಂದು ಪಂಜಿನ ಮೆರವಣಿಗೆ ಆಯೋಜಿಸಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ. ಪಕ್ಷದ ಜಿಲ್ಲಾ ಕಚೇರಿಯಲ್ಲಿ ನ 28ರ ಮಂಗಳವಾರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರದ ದುರಾಡಳಿತದ ವಿರುದ್ದ " ಭಾರತ ನರಳುತ್ತಿದೆ" ಎಂಬ ಜಾಗೃತಿ ಅಭಿಯಾನ ಆರಂಭಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಬೀದಿ ನಾಟಕ ಭಿತ್ತಿಪತ್ರ ಮೂಲಕ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲಾಗುವುದು ಎಂದರು.
ಇನ್ನು ಡಿ 9 ರ ಪಂಜಿನ ಮೆರವಣಿಗೆಯೂ ನಗರದ ಲಾಲ್ ಭಾಗ್ ನ ಕರಾವಳಿ ಉತ್ಸವ ಮೈದಾನದಿಂದ ಹೊರತು ಬಲ್ಮಠ ಮೈದಾನದವರೆಗೆ ತಲುಪಲಾಗುವುದು. ಇನ್ನು ಈ ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡು ರಾವ್, ಜಿಲ್ಲಾ ಸಚಿವ ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ಶಾಸಕ ಐವನ್ ಡಿ ಸೋಜಾ , ಜೆ.ಆರ್ ಲೋಬೋ, ಮೋಯಿದ್ದಿನ್ ಬಾವ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕೇಂದ್ರ ಸರ್ಕಾರ ಜನರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ನೋಟು ಅಮಾನ್ಯೀಕರಣ ಹಾಗೂ ಯಾವುದೇ ಸಿದ್ದತೆ ಇಲ್ಲದೆ ಜಿಎಸ್ ಟಿ ಜಾರಿಯಿಂದ ದೇಶದ ಉದ್ಯಮ ವಲಯ ತಲ್ಲಣಗೊಂಡಿದೆ ಎಂದು ಇದೇ ಸಂದರ್ಭ ಕಿಡಿಕಾರಿದರು. ಈ ಸಂದರ್ಭ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಸೊಹೈಲ್ ಕಂದಕ್, ಪ್ರಸಾದ್ ಮಲ್ಲಿ, ಕಿರಣ್ ಮತ್ತು ಇತರರು ಉಪಸ್ಥಿತರಿದ್ದರು.