ಮಂಗಳೂರು, ಮೇ 29(Daijiworld News/MSP): ರಾಜ್ಯಾದ್ಯಂತ ಇಂದು (ಮೇ 29) ಸರಕಾರಿ ಶಾಲೆಗಳು ಪ್ರಾರಂಭವಾಗಲಿದ್ದು, ಎರಡು ತಿಂಗಳಿಂದ ರಜೆಯ ಮಜಾ ಅನುಭವಿಸಿದ ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲಿದ್ದಾರೆ.
ಒಂದೂವರೆ ತಿಂಗಳ ಕಾಲ ಹೋಂವರ್ಕ್ ನ ಕಿರಿಕಿರಿ ಇಲ್ಲದೆ ಅಜ್ಜ, ಅಜ್ಜಿಯ ಮನೆ, ಪೋಷಕರೊಂದಿಗೆ ಪ್ರವಾಸ, ನೆಂಟರಮನೆ, ಹೊಲಗದ್ದೆ, ಕಾಡುಮೇಡು ಸುತ್ತಿ, ಊರಿನ ಕೆರೆಯಲ್ಲಿ ಈಜಾಡಿ ಮುಳುಗೆದ್ದು ರಜೆಯ ಮಜಾ ಅನುಭವಿಸಿದ ಒಂದರಿಂದ 10 ನೇ ತರಗತಿಯ ಮಕ್ಕಳು ಬುಧವಾರದಿಂದ ಮತ್ತೆ ಮರಳಿ ಶಾಲೆಗೆ ಹೊರಟು ನಿಂತಿದ್ದಾರೆ. ಅವರನ್ನು ಸ್ವಾಗತಿಸಲು ಶಾಲೆಯ ಶಿಕ್ಷಕ ವರ್ಗ ಕೂಡ ಬಹಳ ಉತ್ಸುಕವಾಗಿ ಸಿದ್ಧತೆ ಮಾಡಿಕೊಂಡಿದೆ.
ಆದರೆ, ತೀವ್ರ ಬಿಸಿಲಿನ ತಾಪಮಾನದಿಂದಾಗಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಲೆಗಳ ಪ್ರಾರಂಭೋತ್ಸವವನ್ನು ಎರಡು ವಾರಗಳ ಕಾಲ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೂಡಿದೆ. ರಾಯಚೂರಿನಲ್ಲಿ ಜೂನ್ 5ರವರೆಗೆ ಶಾಲೆ ಆರಂಭವನ್ನು ಜಿಲ್ಲಾಡಳಿತ ಮುಂದೂಡಿದೆ. ಕರಾವಳಿಯಲ್ಲಿ ನೀರಿನ ಸಮಸ್ಯೆಯಿಂದ ಶಾಲಾ ಪ್ರಾರಂಭವನ್ನು ಮುಂದೂಡುವ ಕೂಗೂ ಕೇಳಿ ಬಂದರೂ ನಿಗದಿತ ದಿನಾಂಕದಂದೇ ಶಾಲೆ ಪ್ರಾರಂಭವಾಗುತ್ತಿದೆ.