ಉಡುಪಿ, ಮೇ 28(Daijiworld News/SM): ಇದೀಗ ರಾಜ್ಯದೆಲ್ಲೆಡೆ ಡಿಸಿಪಿ ಅಣ್ಣಾಮಲೈ ರಾಜೀನಾಮೆ ನೀಡುವ ವಿಚಾರವೇ ಬಿಸಿಬಿಸಿ ಚರ್ಚೆಯಾಗುತ್ತಿದೆ. ದಕ್ಷ ಅಧಿಕಾರಿಯೊಬ್ಬರು ರಾಜೀನಾಮೆ ನೀಡಬಾರದೆನ್ನುವ ಆಗ್ರಹಗಳು ಜನಸಾಮಾನ್ಯರಿಂದ ಕೇಳಿ ಬರುತ್ತಿವೆ. ಇನ್ನು ರಾಜಕಾರಣಿಗಳು ಕೂಡ ಇವರ ಪರ ನಿಂತಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಅಣ್ಣಾಮಲೈ ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಬಹಳ ಪ್ರಾಮಾಣಿಕವಾಗಿ, ಶ್ರದ್ದೆಯಿಂದ ಕೆಲಸ ಮಾಡಿದ್ದಾರೆ. ಇವರ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ರಾಜ್ಯಕ್ಕೆ ಅಗತ್ಯವಿದೆ. ಸಣ್ಣ ವಯಸ್ಸಿನಲ್ಲೇ ಅವರು ಹುದ್ದೆಯಿಂದ ಕೆಲವು ಕಾರಣಗಳಿಂದ ನಿವೃತ್ತರಾಗುತ್ತಿದ್ದಾರೆ. ಆದರೆ ಅಣ್ಣಾಮಲೈಯವರು ಇನ್ನಷ್ಟು ಸಮಯ ಕರ್ತವ್ಯ ನಿರ್ವಹಿಸಿದ್ದರೆ ಒಳ್ಳೆಯದಿತ್ತು ಎಂದರು.
ಅಲ್ಲದೆ, ಅವರು ಎಲ್ಲೇ ಕಾರ್ಯನಿರ್ವಹಿಸಿದರೂ ಅವರಿಗೆ ಯಶಸ್ಸು ಸಿಗಲಿ. ಜನರ ಆಶೀರ್ವಾದ ಹಾಗೂ ಬೆಂಬಲ ಪ್ರತಿನಿತ್ಯ ಅಣ್ಣಾಮಲೈಗಿರಲಿ ಎಂದು ಶುಭಹಾರೈಸಿದರು. ಹಾಗೂ ಇಂತಹ ದಕ್ಷ ಹಾಗೂ ಖಡಕ್ ಅಧಿಕಾರಿಗಳು ದೇಶಕ್ಕೆ ಅಗತ್ಯವಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.