ಉಡುಪಿ, 21 (DaijiworldNews/AK): ರಾಜ್ಯ ಸರ್ಕಾರದಿಂದ ಶಾಲಾ ಕಾಲೇಜು ನಿರ್ವಹಣೆ ಅನುದಾನ, ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಸಹಿತ ಹಲವು ಬಾಕಿ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ನೀಡಲಾಗುವ ನಿರ್ವಹಣಾ ಅನುದಾನ ಬಿಡುಗಡೆಯಾಗದೆ, ಶಾಲಾ-ಕಾಲೇಜುಗಳಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲಾಗದೆ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸೂಚನೆ ನೀಡಿರುವ ಸನ್ನಿವೇಶ ನಿರ್ಮಾಣವಾಗಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮರ್ಪಕವಾಗಿ ಗೌರವಧನ ಪಾವತಿಯಾಗದೆ ಸಂಕಷ್ಟಕ್ಕೊಳಗಾಗಿದ್ದಾರೆ.ಪ್ರಾಕೃತಿಕ ವಿಕೋಪದಿಂದ ಹಾನಿಯ ಬಗ್ಗೆ ಜಿಲ್ಲಾಡಳಿತವು ಪರಿಶೀಲನೆ ನಡೆಸಿ ಅಂದಾಜು ರೂ. 234 ಕೋಟಿ ನಷ್ಟದ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿರುತ್ತದೆ. ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ರಸ್ತೆಗಳ, ಚರಂಡಿಗಳ, ಶಾಲೆ-ಅಂಗನವಾಡಿ ಇತ್ಯಾದಿ ಕಟ್ಟಡ ದುರಸ್ತಿಗೆ ಸರಕಾರ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕಾಗಿದೆ.
ರಾಜ್ಯ ಸರಕಾರವು ಕಳೆದ 4 ತಿಂಗಳಿನಿಂದ ಹೈನುಗಾರರಿಗೆ ನೀಡಬೇಕಾದ ಲೀಟರ್ ಒಂದಕ್ಕೆ ರೂ. 5 ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ಹೈನುಗಾರರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದು, ಸದ್ರಿ ಮೊತ್ತವನ್ನು ಏಕ ಕಂತಿನಲ್ಲಿ ಬಿಡುಗಡೆ ಮಾಡಬೇಕು ಮತ್ತು ಸರಕಾರದ ವಿವಿಧ ನಿಗಮ ಮಂಡಳಿಗಳ ಸಿಬ್ಬಂದಿಗಳಿಗೆ ಕಳೆದ 4-6 ತಿಂಗಳುಗಳಿಂದ ವೇತನ ಪಾವತಿಯಾಗದೆ ತೊಂದರೆಗೊಳಗಾಗಿದ್ದು, ತಕ್ಷಣ ನಿಗಮ ಮಂಡಳಿಗಳ ಸಿಬ್ಬಂದಿಗಳ ವೇತನ ಪಾವತಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.