ಕಾಸರಗೋಡು, ಸೆ.21(DaijiworldNews/AA): ಉಪ್ಪಳ ಪತ್ವಾಡಿಯ ಮನೆಯಿಂದ ಕೋಟ್ಯಾ೦ತರ ರೂ. ಮೌಲ್ಯದ ಮಾದಕ ವಸ್ತು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ ನೇಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಗರ್ ಅಲಿ ಎಂಬಾತನನ್ನು ಬಂಧಿಸಲಾಗಿದೆ. ಈತನ ಮನೆಯಲ್ಲಿ ಮಾದಕ ವಸ್ತು ದಾಸ್ತಾನಿಟ್ಟಿರುವುದಾಗಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ಬಂಧಿತ ಅಸ್ಗರ್ ಅಲಿ ಮಧ್ಯವರ್ತಿಯಾಗಿದ್ದನು. ಮಾದಕ ವಸ್ತು ಸಾಗಾಟದ ಹಿಂದೆ ಬೃಹತ್ ಜಾಲ ಹೊಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಅಸ್ಗರ್ ಅಲಿಯ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗುವುದು. ಪೊಲೀಸರ ಚಾಕಚಕ್ಯತೆಯಿಂದ ಬೃಹತ್ ಜಾಲವನ್ನು ಬಯಲಿಗೆ ತರಲಾಗಿದೆ. ಪತ್ವಾಡಿಯ ಮನೆಯಲ್ಲಿ ನಡೆಸಿದ ತಪಾಸಣೆಯಿಂದ 3.40 ಕಿಲೋ ಎಂಡಿಎಂಎ, 640 ಗ್ರಾಂ ಗಾಂಜಾ, 96.96 ಗ್ರಾಂ ಕೊಕೈನ್, 30 ಕ್ಯಾಫ್ಸೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಿ ಆರೋಪಿಯನ್ನು ಮತ್ತೆ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುವುದು. ಇನ್ನು ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದೆ. ತನಿಖೆ ಮುಂದುವರಿಯುತ್ತಿದೆ ಎಂದು ಡಿ. ಶಿಲ್ಪಾ ಹೇಳಿದರು.
ಮೇಲ್ಪರಂಬ ಪೊಲೀಸ್ ಇನ್ಸ್ ಪೆಕ್ಟರ್ ಎ. ಸಂತೋಷ್ ಕುಮಾರ್, ಮಂಜೇಶ್ವರ ಠಾಣಾ ಸಬ್ ಇನ್ಸ್ ಪೆಕ್ಟರ್ ನಿಖಿಲ್, ಸ್ಪೆಷಲ್ ಬ್ರಾಂಚ್ ಸೀನಿಯರ್ ಅಧಿಕಾರಿ ಪ್ರದೀಶ್ ಗೋಪಾಲನ್, ಪ್ರದೀಪನ್ ಮೇಲ್ಪರಂಬ, ವಂದನಾ ಮಂಜೇಶ್ವರ, ಮಧು ಮಂಜೇಶ್ವರ, ಪ್ರಸಾದ್ ವಿದ್ಯಾನಗರ, ಧಣೇಶ್ ಮಂಜೇಶ್ವರ, ಸುಮೇಶ್ ರಾಜ್, ನಿಧೀಶ್ ಮಂಜೇಶ್ವರ, ಪ್ರಶೋಭ್, ನಿಧಿನ್ ಮಂಜೇಶ್ವರ, ಸಲಾಂ ಮಂಜೇಶ್ವರ ಮೊದಲಾದವರು ದಾಳಿ ನಡೆಸಿದ ತಂಡದಲ್ಲಿದ್ದರು.