ಕುಂದಾಪುರ, ಸೆ.21(DaijiworldNews/AA): ಸುಯ್ಯೆಂದು ಬಂದ ಒಂದು ಕಾರನ್ನು ಬೆನ್ನಟ್ಟಿ ಬಂದ ಇನ್ನೊಂದು ಕಾರು ಸಿನಿಮೀಯ ಮಾದರಿಯಲ್ಲಿ ಛೇಸಿಂಗ್ ಮಾಡಿ ಎರಡೂ ಕಾರುಗಳಲ್ಲಿದ್ದವರು ಹೊಡೆದಾಡಿಕೊಂಡು ಬಳಿಕ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ನಂದನವನದಲ್ಲಿ ನಡೆದಿದೆ.
ಗುರುವಾರ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗುರುವಾರ ಸಂಜೆ ಸುಮಾರು 3 ಗಂಟೆಗೆ ನಾಲ್ಕು ಜನರಿದ್ದ ಕಾರು ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅತೀ ವೇಗವಾಗಿ ಬರುತ್ತಿತ್ತು. ಅದನ್ನು ಬೆನ್ನಟ್ಟಿಕೊಂಡು ಇನ್ನೊಂದು ಕಾರು ಬಂದಿದೆ. ಎದುರಿದ್ದ ಕಾರಿನಲ್ಲಿ ನಾಲ್ಕು ಜನರ ಪೈಕಿ ಇಬ್ಬರು ಹುಡುಗಿಯರೂ ಇದ್ದರೆನ್ನಲಾಗಿದೆ. ಹೀಗೇ ಬರುತ್ತಿದ್ದ ಕಾರು ಉಪ್ಪುಂದದ ನಂದನವನ ಎಂಬಲ್ಲಿ ಅಡ್ಡರಸ್ತೆಯಲ್ಲಿ ನುಗ್ಗುತ್ತದೆ. ಅಲ್ಲಿ ಇಬ್ಬರು ಹುಡುಗಿಯರನ್ನು ಅತೀ ವೇಗದಲ್ಲಿ ಇಳಿಸಿ ಕಾರು ಮುಂದಕ್ಕೆ ಹೋಗುತ್ತದೆ. ಬೆನ್ನಟ್ಟಿಕೊಂಡು ಬಂದ ಕಾರು ಎದುರಿನ ಕಾರನ್ನು ಛೇಸ್ ಮಾಡುತ್ತಾ ಮುಂದಕ್ಕೆ ಹೋಗುತ್ತದೆ.
ಇದೆಲ್ಲವನ್ನೂ ಗಮನಿಸಿದ ಮಹಾಬಲೇಶ್ವರ ಮತ್ತು ಕಟ್ಗೇರಿ ಯುವಕರು ಕಾರುಗಳನ್ನು ಬೆನ್ನತ್ತಿದ್ದಾರೆ. ಕಾರು ನಂದನವನ ಹೊಳೆಯ ಬದಿಯಲ್ಲಿರುವ ಒಂದು ಮನೆಯ ಅಂಗಳದಿಂದ ಮುನ್ನುಗ್ಗಿ ಹೊಳೆಯ ಬದಿಯಲ್ಲಿ ಕಾರು ನಿಲ್ಲಿಸಿ ಹೊಳೆ ಹಾರಿ ಮತ್ತೊಂದು ಕಡೆಯಿಂದ ಓಡಿ ಹೋಗಲು ಯತ್ನಿಸುತ್ತಿದ್ದಾಗ ನಂದನವನ ಗ್ರಾಮದ ಕೆಲ ಯುವಕರು ಮತ್ತು ಹೆಂಗಸರು ಸೇರಿ ಇಬ್ಬರನ್ನು ಹಿಡಿದಿದ್ದಾರೆ. ಬಳಿಕ ಹಿಂದಿನ ಕಾರಿನಲ್ಲಿದ್ದವರನ್ನು ವಿಚಾರಿಸಿದ್ದಾಗ ಅವರ ಕಾರನ್ನು ಕಳ್ಳತನ ಮಾಡಿಕೊಂಡು ಬಂದು ಅಪರಾಧ ಕೃತ್ಯಗಳಿಗೆ ಬಳಸುತ್ತಿದ್ದರೆಂಬುದು ತಿಳಿದು ಬಂದಿದೆ.
ಅಪಹರಣಕ್ಕೊಳಗಾದ ಕಾರನ್ನು ಪರೀಕ್ಷಿಸಿದಾಗ ಡಿಕ್ಕಿಯಲ್ಲಿ ಮಾರಾಕಾಸ್ತ್ರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಬಳಿಕ ಬೈಂದೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಪೊಲೀಸ್ ಜೀಪಿನಲ್ಲಿ ಕುಳಿತುಕೊಂಡೆ ನೀವು ಭಟ್ಕಳಕ್ಕೆ ಬನ್ನಿ ನೋಡಿಕೊಳ್ಳುತ್ತೇವೆ ಅಂತ ಧಮ್ಕಿ ಹಾಕಿದ್ದಾರೆ. ಬಳಿಕ ಪೊಲೀಸರು ಏನು ಮಾಡಿದರು ಎನ್ನುವ ಬಗ್ಗೆ ಮಾಹಿತಿ ಲಭಿಸಿಲ್ಲ ಎನ್ನಲಾಗಿದೆ. ಇನ್ನು ಘಟನೆಯ ವಿಡಿಯೋಗಳು ಈಗ ವೈರಲ್ ಆಗುತ್ತಿದೆ.