ಕಾರ್ಕಳ, ಸೆ.20(DaijiworldNews/AA): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ "ಒಂದು ದೇಶ ಒಂದು ಚುನಾವಣೆ" ನೀತಿ ಈ ದೇಶದ ಫೆಡರಲ್ ವ್ಯವಸ್ಥೆಗೆ ಮಾರಕವಾಗಲಿದೆ. ಇದರ ಹಿಂದೆ ಅಧ್ಯಕ್ಷೀಯ ಆಡಳಿತದ ಸರ್ವಾಧಿಕಾರದ ಸಂಚು ಅಡಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.
ಈ ಮಸೂದೆ ಸಂವಿಧಾನದ ಪ್ರಜಾಪ್ರತಿನಿಧಿ ಕಾಯ್ದೆ-1951ರ ಸ್ಪಷ್ಟ ಉಲ್ಲಂಘನೆ ಆಗಿದೆ. ಅವಿಶ್ವಾಸ ನಿರ್ಣಯದ ನಿಬಂಧನೆಗೆ ತಿದ್ದುಪಡಿಯೊಂದಿಗೆ ಇದು ಲೋಕಸಭೆ ಮತ್ತು ವಿಧಾನ ಸಭೆಗಳ ಜನಪ್ರತಿನಿಧಿಗಳ ಹಕ್ಕುಚ್ಯುತಿಗೆ ಕಾರಣವಾಗಲಿದೆ. ಇದರಿಂದ ಸ್ವೇಚ್ಚಾಚಾರದ ಅಡಳಿತ ನಡೆಸುವ ಸರ್ಕಾರಗಳ ವಿರುದ್ಧ ಮಂಡಿಸಬಹುದಾದ ಅವಿಶ್ವಾಸ ನಿರ್ಣಯದ ಹಕ್ಕನ್ನು ಜನಪ್ರತಿನಿಧಿಗಳು ಕಳೆದುಕೊಳ್ಳಲಿದ್ದಾರೆ. ಐದು ವರ್ಷಗಳ ಆಡಳಿತ ನಡೆಸುವ ಅನಿವಾರ್ಯತೆ ಆಳುವ ಪಕ್ಷವನ್ನು ಸ್ವೇಚ್ಚಾಚಾರದತ್ತ ತಳ್ಳಿದರೆ ಪ್ರತಿಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿಯೇ ಮೂಖಪ್ರೇಕ್ಷಕನಾಗಿ ಕೂರ ಬಹುದಾದ ದುರಂತ ಪರಿಸ್ಥಿತಿ ಬರಲಿದ್ದು ಜನಪ್ರತಿನಿಧ್ಯದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಮಾರಕವಾಗಲಿದೆ ಎಂದಿದ್ದಾರೆ.
ಈ ದೇಶದ ಸಂವಿಧಾನ ಯಾವುದೇ ಕಾರಣಕ್ಕೂ ತನ್ನ ಫೆಡರಲ್ ವ್ಯವಸ್ಥಯಡಿಯಲ್ಲಿ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆಯನ್ನು ಪ್ರತಿನಿಧಿಸದೇ ಇರುವುದು ಇಲ್ಲಿ ಉಲ್ಲೇಖನೀಯ. ಸ್ವಾತಂತ್ರ್ಯಾ ನಂತರದ ಎರಡು ಅವಧಿಗೆ 1967ವರೆಗೆ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆದ ಹೊರತಾಗಿಯೂ ಮುಂದಿನ ಅವಧಿಗಳಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಾದ ಜನಜಾಗೃತಿ, ಸ್ಥಳೀಯ ಪಕ್ಷಗಳ ರಾಜಕೀಯ ಹಿತಾಸಕ್ತಿ ದೇಶದಲ್ಲಿ ಮತ್ತೆ ಏಕಕಾಲದಲ್ಲಿ ಚುನಾವಣೆಯನ್ನು ಆಗಗೊಡಲಿಲ್ಲ. ಇದು ಫೆಡರಲ್ ವ್ಯವಸ್ಥೆಯ ಸಹಜ ಲಕ್ಷಣ ಎಂದಿರುವ ಅವರು 2024ರ ಚುನಾವಣೆಯಲ್ಲಿ ಅನ್ಯರ ಸಹಕಾರದಿಂದ ಸರಕಾರ ರಚಿಸಬೇಕಾದ ದುಸ್ಥಿತಿಗಿಳಿದ ಬಿಜೆಪಿ ಚುನಾವಣಾ ಖರ್ಚುವೆಚ್ಚದ ಲೆಕ್ಕ ತೋರಿಸಿ ಅಪರ ದಾರಿಯಲ್ಲಿ ಪ್ರಜಾಪ್ರಭುತ್ವವನ್ನು ಅಧ್ಯಕ್ಷೀಯ ಸ್ವರೂಪದ ಸರ್ವಾಧಿಕಾರದತ್ತ ಪರಿವರ್ತನೆಗೊಳಿಸುವ ದುರುದ್ದೇಶ ಹೊಂದಿದ್ದು ಪ್ರಜಾತಂತ್ರಕ್ಕಿದು ಸ್ವೀಕಾರಾರ್ಹವಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.