ಕಾಸರಗೋಡು, ಮೇ 28(Daijiworld News/SM): ಕಾರಿನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದವರ ಮೇಲೆ ಸಂಘ ಪರಿವಾರ ಕಾರ್ಯಕರ್ತರ ತಂಡವೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ಮುಂಜಾನೆ ಕಾಸರಗೋಡು ನಗರ ಹೊರವಲಯದ ತಾಳಿಪಡ್ಪು ಎಂಬಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ಕೊಲೆ ಸೇರಿದಂತೆ ಏಳಕ್ಕೂ ಅಧಿಕ ಪ್ರಕರಣದ ಆರೋಪಿಯೋರ್ವನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೂಡ್ಲುವಿನ ಅಜಯ್ ಕುಮಾರ್(23) ಎಂದು ಗುರುತಿಸಲಾಗಿದೆ. ಕಾಞ೦ಗಾಡ್ ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಿ. ಎಚ್ ಫಾಯಿಜ್(23) ಸ್ನೇಹಿತ ಅನಾಸ್(21) ಎಂಬವರು ಸೋಮವಾರ ಮುಂಜಾನೆ ರಾಷ್ಟೀಯ ಹೆದ್ದಾರಿ ಬದಿಯ ತಾಳಿಪಡ್ಪುವಿನಲ್ಲಿ ಕಾರು ನಿಲ್ಲಿಸಿದ ಸಂದರ್ಭ ಅಲ್ಲಿಗೆ ತಲುಪಿದ ಅಜಯ್ ಕುಮಾರ್ ನೇತೃತ್ವದ ತಂಡವು ಕಾರಲ್ಲಿದ್ದವರ ಹೆಸರು ಕೇಳಿ ಹಲ್ಲೆ ನಡೆಸಿತು. ಅಜಯ್ ಕುಮಾರ್ ಮತ್ತು ಆತನ ಸ್ನೇಹಿತರು ಸೇರಿ ಹಲ್ಲೆ ನಡೆಸಿದ್ದರು.
ಗಲ್ಫ್ ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪುವ ಸಂಬಂಧಿಕರೋರ್ವರನ್ನು ಕರೆ ತರಲು ಫಾಯಿಜ್ ಮತ್ತು ಅನಾಸ್ ತೆರಳುತ್ತಿದ್ದಾಗ ತಾಳಿಪಡ್ಪು ರಸ್ತೆ ಬದಿ ಕಾರು ನಿಲ್ಲಿಸಿದಾಗ ಕಾರಿನಿಂದ ಬಲವಂತವಾಗಿ ಹೊರಕ್ಕೆಳೆದ ತಂಡವು ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಂಧಿತ ಅಜಯ್ ಕುಮಾರ್ 2014ರ ಡಿಸಂಬರ್ 22ರಂದು ನಡೆದ ಜೈನುಲ್ ಆಬಿದ್ ಕೊಲೆ ಪ್ರಕರಣದ ಒಂಭತ್ತನೇ ಆರೋಪಿಯಾಗಿದ್ದಾನೆ. ಇದಲ್ಲದೆ 2015ರ ನವಂಬರ್ ಎಂಟರಂದು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ, 2016ರ ಆಗಸ್ಟ್ 26ರಂದು ಬಸ್ಸು ಚಾಲಕನೋರ್ವನ ಮೇಲೆ ಹಲ್ಲೆ ನಡೆಸಿದ ಹಾಗೂ ಸ್ಥಳಕ್ಕೆ ಬಂದ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಈತನ ಮೇಲೆ ದಾಖಲಾಗಿದೆ.
2018ರ ಮಾರ್ಚ್ 18ರಂದು ಬೀರಂತಬೈಲ್ ನಲ್ಲಿ ವ್ಯಕ್ತಿಯೋರ್ವನಿಗೆ ಇರಿದ ಹಾಗೂ ರಾಡ್ ನಿಂದ ಹೊಡೆದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. 2019 ರ ಜನವರಿ 18ರಂದು ಅಡ್ಕತ್ತಬೈಲ್ ನಲ್ಲಿ ಇನ್ನೋರ್ವ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.