Karavali
ಬಂಟ್ವಾಳ: ಆಡಳಿತಾಧಿಕಾರಿ ಕಾಲದ ಗೌರವಧನ ಕೊಡಿಸಿ:ಆಡಳಿತ ಪಕ್ಷದ ಸದಸ್ಯರ ಪಟ್ಟು
- Thu, Sep 19 2024 08:54:03 AM
-
ಬಂಟ್ವಾಳ, ಸೆ.18 (DaijiworldNews/ AK):ಕಳೆದ ಒಂದೂವರೆವರ್ಷ ಆಡಳಿತಾಧಿಕಾರಿಯವರಿದ್ದ ಕಾಲದ ಗೌರವಧನವನ್ನು ಪಾವತಿಸಬೇಕು,ಈ ನಿಟ್ಟಿನಲ್ಲಿ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಈ ಸಾಮಾನ್ಯ ಸಭೆಯ ಗೌರವಧನ ಸ್ವೀಕರಿಸುವುದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟುಹಿಡಿದ ಪ್ರಸಂಗ ಒಂದೂವರೆ ವರ್ಷದ ಬಳಿಕ ಬುಧವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಅವರು ಅಧ್ಯಕ್ಷತೆ ವಹಿಸಿದ್ದು,ಆಡಳಿತಪಕ್ಷದ ಸದಸ್ಯರಾದ ಜನಾರ್ದನ ಚಂಡ್ತಿಮಾರ್,ಮಹಮ್ಮದ್ ಶರೀಫ್,ರಾಮಕೃಷ್ಣ ಆಳ್ವ,ಹಸೈನಾರ್,ಸಿದ್ದೀಕ್ ಮತ್ತಿತರರು ವಿಷಯ ಪ್ರಸ್ತಾವಿಸಿ ಬಂಟ್ವಾಳ ಹೊರತುಪಡಿಸಿ ಜಿಲ್ಲೆಯ ಇತರೆ ಪುರಸಭೆ,ನಗರಸಭೆಯಲ್ಲಿ ಸದಸ್ಯರಿಗೆ ಆಡಳಿತಾಧಿಕಾರಿಯಿದ್ದ ಕಾಲದ ಗೌರವಧನ ನೀಡಲಾಗಿದೆ.ಆದರೆ ಇಲ್ಲಿ ಯಾಕೆ ನೀಡಲಾಗುತ್ತಿಲ್ಲ,ಜಿಲ್ಲಾಧಿಕಾರಿಯವರು ಸೂಚನೆ ನೀಡಿದರೂ ಯಾಕೆ ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸುವಂತೆ ಒತ್ತಾಯಿಸಿದರು.
ನಾವು ಗೌರವಧನಕ್ಕಾಗಿಯೇ ಇರುವವಲ್ಲ, ಭಿಕ್ಷೆಯನ್ನು ಕೇಳುವುದಲ್ಲ ಜಿಲ್ಲೆಯ ಇತರ ಕಡೆ ಪುರಸಭಾ ಸದಸ್ಯರಿಗೆ ಗೌರವಧನ ನೀಡಿರುವಾಗ ಇಲ್ಲಿ ಯಾಕೆ ಹೀಗೆ ಎಂದು ಆಡಳಿತಪಕ್ಷದ ಸದಸ್ಯರು ಗರಂ ಆಗಿಯೇ ಪ್ರಶ್ನಿಸಿದರು. ಸದಸ್ಯ ಜನಾರ್ದನ ಚಂಡ್ತಿಮಾರು ಅವರು ಒಂದು ಹಂತದಲ್ಲಿ ಜಿಲ್ಲಾಧಿಕಾರಿಯವರು ಹೊರಜಿಲ್ಲೆಯವರೇ? ಬಂಟ್ವಾಳ ಪುರಸಭೆ ಪಾಕಿಸ್ತಾನದಲ್ಲಿದೆಯೆ? ಎಂದು ಪ್ರಶ್ನಿಸಿದ ಪ್ರಸಂಗವು ನಡೆಯಿತಲ್ಲದೆ ಅಧಿಕಾರ ಸ್ವೀಕರಿಸಿ ಇಷ್ಟು ದಿನವಾದರೂ ಅಧ್ಯಕ್ಷರು ಯಾಕೆ ಈ ವಿಚಾರದಲ್ಲಿ ಮೌನವಹಿಸಿದ್ದರಿ ಎಂದು ಕೇಳಿದರು.
ಆಡಳಿತ ಪಕ್ಷದ ಸದಸ್ಯರ ಪಟ್ಟಿಗೆ ಮಣಿದ ಅಧ್ಯಕ್ಷ ವಾಸುಪೂಜಾರಿ ಅವರು ಕೂಡಲೇ ಯೋಜನಾ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಬಗ್ಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ ಬಳಿಕ ಈ ಚರ್ಚೆಗೆ ತೆರೆ ಬಿತ್ತು.
1×23 ಯೋಜನೆ:
ಕಾಮಗಾರಿ ಅಪೂರ್ಣಗೊಂಡಿರುವುದಲ್ಲದೆ ಪುರಸಭಾ ವ್ಯಾಪಿಯಲ್ಲಿ ಇನ್ನೂಕೂಡ ಸಮರ್ಪಕವಾಗಿ ನೀರು ಪೂರೈಕೆಗೆ ಸಾಧ್ಯವಾಗದ ಜಕ್ರಿಬೆಟ್ಟುವಿನಲ್ಲಿ ಅನುಷ್ಠಾನಗೊಂಡ ಎರಡನೇ ಹಂತದ 24×7 ಕುಡಿಯುವ ನೀರಿನ ಯೋಜನೆಯನ್ನು ಕೆಯುಡಬ್ಲು ಎಸ್ ಬಂಟ್ವಾಳ ಪುರಸಭೆಗೆ ಹಸ್ತಾಂತರಿಸುವ ಕುರಿತು ರವಾನಿಸಿರುವ ಪತ್ರದ ಕುರಿತು ಸಾಮಾನ್ಯಸಭೆಯ ಅಜೆಂಡಾದಲ್ಲಿರಿಸದ ವಿಚಾರವು ಬಿಸಿ,ಬಿಸಿ ಚರ್ಚೆಗೆ ಕಾರಣವಾಯಿತು.
ಅವೈಜ್ಞಾನಿಕ ಪೈಪ್ ಲೈನ್ ,ಹೆದ್ದಾರಿ ಕಾಮಗಾರಿಯಿಂದಾಗಿ ಮೆಲ್ಕಾರ್ ,ಬಿ.ಸಿ.ರೋಡಿನ ಕೆಲಭಾಗಗಳಲ್ಲಿ10 ದಿನಗಳಿಂದ ಕುಡಿಯುವ ನೀರಿಲ್ಲದೆ ಜನರು ಪರಿತಪಿಸುತ್ತಿದ್ದಾರೆ ಎಂದು ಸದಸ್ಯ ಗೋವಿಂದ ಪ್ರಭು ಅವರು ಸಭೆಯ ಗಮನಸೆಳೆದರು.ಈ ನಡುವೆ ಯೋಜನೆಯನ್ನು ಪುರಸಭೆಗೆ ಹಸ್ತಾಂತರಿಸುವ ಕುರಿತ ಪತ್ರ ಪುರಸಭೆಗೆ ಬಂದಿದ್ದರೂ ಇಂತಹ ಗಂಭೀರ ವಿಚಾರವನ್ನು ಸಾಮಾನ್ಯ ಸಭೆಯ ಅಜೆಂಡಾದಲ್ಲಿರಿಸದ ಬಗ್ಗೆ ಅಧ್ಯಕ್ಷರು ಮತ್ತು ಇಂಜಿನಿಯರ್ ಅವರನ್ನು ಗೋವಿಂದಪ್ರಭು ತರಾಟೆಗೂ ತೆಗೆದುಕೊಂಡರು. ಪತ್ರ ಬಂದಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ ಎಂದು ಅಧ್ಯಕ್ಷ ವಾಸುಪೂಜಾರಿ ಅವರು ಸಮಜಾಯಿಷಿ ನೀಡಿದರೆ,ಒರ್ವ ಸದಸ್ಯನಿಗೆ ಮಾಹಿತಿ ಸಿಕ್ಕಿರುವಾಗ ಅಧ್ಯಕ್ಷರಿಗೆ ಗೊತ್ತಿಲ್ಲ ಎನ್ನುವುದೇ ಅಶ್ಚರ್ಯ ತಂದಿದೆ ಎಂದು ಪ್ರಭು ತಿರುಗೇಟು ನೀಡಿದರು.24×7 ಕುಡಿಯುವ ನೀರಿನ ಯೋಜನೆ:
ಅರೆ ಬರೆ ಕಾಮಗಾರಿ,ಪೈಪ್ ಲೈನ್ ಅವ್ಯವಸ್ಥೆ,ಯೋಜನೆ ಕಾರ್ಯಗತಗೊಂಡು ಐದು ವರ್ಷಕಳೆದರೂ ಇನ್ನುಜನರಿಗೆ ಸರಿಯಾಗಿ 1ತಾಸು ನೀರು ಕೊಡಲಾಗದಿರುವುರಿಂದ ಇದು 24×7 ಅಲ್ಲ ,ಇದು 1×23 ಯೋಜನೆ ಎಂದು ಸದಸ್ಯ ಗೋವಿಂದಪ್ರಭು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸದಸ್ಯರಾದ ಸಿದ್ದೀಕ್ ,ರಾಮಕೃಷ್ಣ ಆಳ್ವ ಜೆಸಿಂತಾ ಡಿಸೋಜ ಅವರು ಧ್ವನಿಗೂಡಿಸಿದರು.ಆಗ ಮಧ್ಯಪ್ರವೇಶಿಸಿದ ಅಧ್ಯಕ್ಷ ವಾಸುಪೂಜಾರಿ ಅವರು ಈ ವಿಚಾರದಲ್ಲಿ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ಕೆಯುಡಬ್ಲ್ಯುಎಸ್ ಇಂಜಿನಿಯರ್ ಹಾಗೂ ಸದಸ್ಯರನ್ನೊಳಗೊಂಡು ಶೀಘ್ರದಲ್ಲೇ ವಿಶೇಷಸಭೆ ಕರೆಯುವುದಾಗಿ ರೂಲಿಂಗ್ ನೀಡಿದರು.ಗಡಿಭಾಗದಲ್ಲಿ ಕಸ
ಪುರಸಭಾ ವ್ಯಾಪ್ತಿಯ ಗಡಿಪ್ರದೇಶದಲ್ಲಿ ಪಕ್ಕದ ಗ್ರಾ.ಪಂ.ವ್ಯಾಪ್ತಿಯ ಜನರು ಕಸತಂದು ರಾಸದಿ ಹಾಕಲಾಗುತ್ತಿದ್ದು,ಈ ಬಗ್ಗೆ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಪಾಣೆಮಂಗಳೂರಿನ ಶ್ರೀಶಾರದಾ ಹೈಸ್ಕೂಲ್ ಬಳಿ,ಲೊರೆಟ್ಟೋಪದವು,ತಲಪಾಡಿ ಹೀಗೆ ಗಡಿ ಪ್ರದೇಶದಲ್ಲಿ ಗ್ರಾ.ಪಂ.ವ್ಯಾಪ್ತಿಯ ಜನರು ಕಸ ತಂದು ರಾಶಿಹಾಕುವುದರಿಂದ ಸಮಸ್ಯೆಯಾಗುತ್ತಿದೆ. ಹಾಗೆಯೇ ಪಾಣೆಮಂಗಳೂರು ಪರಿಸರದಲ್ಲಿ ಸಮರ್ಪಕ ಕಸವಿಲೇವಾರಿಯು ಆಗುತ್ತಿಲ್ಲ, ಪರಿಸರವಿಡೀ ರ್ದುನಾತ ಬೀರುತ್ತಿದೆ. ಇದರಿಂದಾಗಿ ರೋಗದ ಭೀತಿಯು ಎದುರಾಗಿದೆ. ಎಂದು ಸದಸ್ಯರಾದ ಇದ್ರೀಸ್,ಸಿದ್ದೀಕ್ ,ರಾಮಕೃಷ್ಣ ಅಳ್ವ ಅವರು ಸಭೆಯ ಗಮನಕ್ಕೆ ತಂದರು.
ಸಿ.ಸಿ.ಕ್ಯಾಮರಾ ಅಳವಡಿಸಿದರೂ ಕಸ ಎಸೆಯುವುದು ನಿಂತಿಲ್ಲ,ಸಿ.ಸಿ.ಕ್ಯಾಮರವೇ ಚಾಲನೆಯಲ್ಲಿ ಇಲ್ಲ,ಈ ವಿಚಾರ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ ಎಂದು ಅಧ್ಯಕ್ಷ ವಾಸುಪೂಜಾರಿ ತಿಳಿಸಿದರು.
ಆಗ ಮಧ್ಯಪ್ರವೇಶಿಸಿದ ಸದಸ್ಯರಾದ ಗೋವಿಂದಪ್ರಭು,ಹರಿಪ್ರಸಾದ್ ಈ ವಿಚಾರದಲ್ಲಿ ವಿಪಕ್ಷ ಸದಸ್ಯರು ಧರಣಿ ನಡೆಸಿ,ಸಭಾತ್ಯಾಗ ಮಾಡಿದರೂ ನಮಗೆ ಉತ್ತರ ಇನ್ನು ಸಿಕ್ಕಿಲ್ಲ,ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿಯವರಿಗೆ 11 ಮಂದಿ ಸದಸ್ಯರ ಸಹಿಯುಳ್ಳ ದೂರು ಕೊಟ್ಟರೂ ಈ ವರೆಗೂ ಕ್ರಮಕೈಗೊಳ್ಳದೆ ತೆಪ್ಪಗೆ ಮಲಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಸ ಎಸೆದವರ ವಿರುದ್ದ ಕ್ರಮಕ್ಕೆ ಮುಂದಾದಾಗ ಸದಸ್ಯರೇ ಅವರು ನಮ್ಮ ಸಹೋದರನ ಮಗ,ಅವರು ನಮ್ಮ ಸಂಬಂಧಿಕರು ಎಂದು ಸದಸ್ಯರೇ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಾರೆ.ಇದಕ್ಕೆ ಸಾಕಷ್ಟು ಉದಾಹರಣೆಯು ಇದೆ ಎಂದು ಸದಸ್ಯಹರಿಪ್ರಸಾದ್ ಸಭೆಯ ಗಮನಸೆಳೆದರು.ಗಡಿ ಪ್ರದೇಶದಲ್ಲಿ ಕಸವಿಲೇವಾರಿ ನಡೆಸಿ ಬಳಿಕ ಅಲ್ಲಿ ಕಬ್ಬಿಣದ ನೆಟ್ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದು ಅಧ್ಯಕ್ಷ ವಾಸುಪೂಜಾರಿ ಭರವಸೆ ನೀಡಿದರು.ಪುರಸಭಾ ವ್ಯಾಪ್ತಿಯಲ್ಲಿರುವ ಕಾಡಿನಂತೆ ಬೆಳೆದಿರುವ ಗಿಡಿಗಂಟಿಗಳನ್ನು ಕತ್ತರಿಸಲು ಖಾಸಗಿಯವರಿಗೆ ವಹಿಸುವುದು ಸೂಕ್ತ ಎಂದು ಸದಸ್ಯರು ಸಲಹೆ ನೀಡಿದರು.
ಪುರಸಭೆಯಲ್ಲಿರುವ 8 ಹುಲ್ಲು ಕತ್ತರಿಸುವ ಯಂತ್ರದ ಪೈಕಿ ಕೇವಲ ಒಂದೇ ಇದ್ದು,ಉಳಿದವು ಕೆಟ್ಟು ಹೋಗಿದೆ.ಹೊಸ ಯಂತ್ರ ಖರೀದಿಸುವಂತೆ
ಸದಸ್ಯ ಮಹಮ್ಮದ್ ನಂದರ ಬೆಟ್ಟು ಅವರು ಸಲಹೆ ನೀಡಿದರು.ಈ ಸಂದರ್ಭ ರಾಮಕೃಷ್ಣ ಆಳ್ವ ಅವರು ಪ್ರತಿಕ್ರಿಯಿಸಿ ಹುಲ್ಲು ಕತ್ತರಿಸಲು ಖಾಸಗಿಯವರಿಗೆ ವಹಿಸಿದರೆ ಸೂಕ್ತ ಎಂದರು.ಸಭೆಯಲ್ಲಿ ವಿವಿಧ ಕಾಮಗಾರಿಗೆ ಕರೆದ ಟೆಂಡರನ್ನು ಮಂಜೂರು ಮಾಡಲಾಯಿತು.ಪೌರಕಾರ್ಮಿಕರ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು,ಅಂದು ಸದಸ್ಯರೆಲ್ಲರು ಭಾಗವಹಿಸುವಂತೆ ಅಧ್ಯಕ್ಷ ವಾಸು ಪೂಜಾರಿ ಮನವಿ ಮಾಡಿದರು.
ಅಧಿಕಾರಿಗಳಿಗೆ ಚುರುಕು:
ಒಂದುವರೆ ವರ್ಷಗಳ ಕಾಲ ಜನಪ್ರತಿನಿಧಿಗಳ ಆಡಳಿತವಿಲ್ಲದೆ ನಿಷ್ಕ್ರಿಯವಾಗಿದ್ದ ಬಂಟ್ವಾಳ ಪುರಸಭೆಯ ಅಧಿಕಾರಿಗಳಿಗೆ ಮೊದಲ ಸಭೆಯಲ್ಲಿ ಸಾಮಾನ್ಯ ಸಭೆಯ ಮೂಲಕ ಚುರುಕು ಮುಟ್ಟಿಸಿದರು.ಸಭೆಯ ಕೊನೆಗಳಿಗೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ ನನ್ನ ಆಡಳಿತಾವಧಿಯಲ್ಲಿ ಅಧಿಕಾರಿಗಳು,ಕೆಲ ಸದಸ್ಯರು ಸ್ಪಂದಿಸದೆ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದೆ.ಇದು ನನ್ನ ಮನಸ್ಸಿನ್ನು ಈಗಲು ಕಾಡುತ್ತಿದೆ.ಈ ವಿಚಾರದಲ್ಲಿ ನನಗೆ ನೋವಿದೆ ಎಂದು ತಿಳಿಸಿದರಲ್ಲದೆ ನೂತನ ಅಧ್ಯಕ್ಷರಾಗಿ ಪ್ರಥಮ ಸಭೆ ನಡೆಸಿದ್ದಿರಿ ನಿಮಗೆ ನಮ್ಮ ಸಹಕಾರ ಇದೆ. ಆದರೆ ನನಗೆ ಹಿಂದಿನದ್ದೆಲ್ಲವು ನೆನೆಪಿದೆ.ಅಧಿಕಾರಿಗಳನ್ನುಕೂಡ ಯಾರನ್ನು ಬದಲಾಯಿಸದೆ ತಮ್ಮ ಅವಧಿ ಮುಗಿಯವರೆಗೆ ಇಲ್ಲಿಮುಂದುವರಿಸಿ ಕೆಲಸ ಮಾಡಿಸಬೇಕೆಂದರು.
ಇತ್ತೀಚೆಗೆ ವಿ.ಹಿಂ.ಪ.ಮುಖಂಡರಾದ ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ್ದ ನಿಕಟಪೂರ್ವ ಅಧ್ಯಕ್ಷ ಶರೀಫ್ ಹಾಗೂ ಸದಸ್ಯ ಹಸೈನಾರ್ ಸಭೆ ಆರಂಭಗೊಂಡು ಆರ್ಧಭಾಗ ಮುಗಿದ ಬಳಿಕ ಜೊತೆಯಾಗಿ ಹಾಜರಾಗಿ ಕಲಾಪದಲ್ಲಿ ಭಾಗವಹಿಸಿ ಗಮನಸೆಳೆದರು.ಸ್ಥಾಯಿಸಮಿತಿ ರಚನೆಗೆ ಬದ್ಧ:
ಬಂಟ್ವಾಳ ಪುರಸಭೆಯಲ್ಲಿ ಮೊದಲ ಆಡಲಕಿತಾವಧಿಯಲ್ಲಿ ಸ್ಥಾಯಿ ಸಮಿತಿ ಅಸ್ತಿದಲ್ಲಿರಲಿಲ್ಲ,ಈ ದೆಸೆಯಲ್ಲಿ ಸದಸ್ಯ ಜನಾರ್ದನ ಚಂಡ್ತಿಮಾರ್ ಅವರು ಬಂಟ್ವಾಳ ಪುರಸಭೆಗೆ ಸ್ಥಾಯಿ ಸಮಿತಿ ಅನ್ವಯಿಸುವುದಿಲ್ಲವೆ ಎಂದು ಅಧ್ಯಕ್ಷ ವಾಸುಪೂಜಾರಿಯವರನ್ನುನೇರವಾಗಿ ಪ್ರಶ್ನಿಸಿದರು.
ಕೆಲ ಕೆಲಸದ ಹೊರೆ ಕಡಿಮೆ ಮಾಡಲು ಸ್ಥಾಯಿಸಮಿತಿಯ ಅಗತ್ಯವಿದೆ.ಮುಂದಿನ ತಿಂಗಳ ಸಭೆಯ ಅಜೆಂಡಾದಲ್ಲಿ ಇದನ್ನು ತಂದು ಸ್ಥಾಯಿಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದರು.ಉಪಾಧ್ಯಕ್ಷ ಮೂನೀಷ್ ಆಲಿ,ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ವೇದಿಕೆಯಲ್ಲಿದ್ದರು,ಆರೋಗ್ಯ ನಿರೀಕ್ಷಕ ರತ್ನಪ್ರಸಾದ್,ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ,ಸಿಬ್ಬಂದಿಗಳಾದ ರಜಾಕ್,ಉಮಾವತಿ ಮತ್ತಿತರರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.ಸದಸ್ಯರಾದ ಶಶಿಕಲಾ,ವಿದ್ಯಾವತಿ,ದೇವಕಿ,ಲೋಲಾಕ್ಷ ಶೆಟ್ಟಿ,ಝೀನತ್ ಪಿರೋಜ್, ಮಹಮ್ಮದ್ ನಂದರಬೆಟ್ಟು,ಜಯರಾಮ ನಾಯ್ಕ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.