ಮಂಗಳೂರು,ಮೇ 28 (Daijiworld News/MSP): ಯಕ್ಷಗಾನವನ್ನೇ ತಮ್ಮ ಬದುಕಾಗಿಸಿ ದುಡಿಯುತ್ತಿರುವ ಯಕ್ಷಗಾನ ಕಲಾವಿದರಿಗೆ ವಾರ್ಷಿಕ ಮಾಸಾಶನ ನೀಡುವ ಕುರಿತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ಮೇ ೨೮ ರಂದು ಮಂಗಳವಾರ ನಗರದ ಮಂಗಳಾ ಸ್ಟೇಡಿಯಂನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಯಕ್ಷಧ್ರುವ ಕ್ರೀಡಾಕೂಟ 2019 ವೃತ್ತಿಪರ ಯಕ್ಷಗಾನ ಕಲಾವಿದರ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು.
ವರ್ಷದ ಪೂರ್ತಿ ದಿನಗಳು ಕಲಾವಿದರಿಗೆ ಮೇಳದಲ್ಲಿ ಕೆಲಸ ಇರುವುದಿಲ್ಲ. ಕಲಾವಿದರ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳಿರುತ್ತವೆ. ಯಕ್ಷಗಾನ ಕಲಾವಿದರಿಗೆ ಮಾಸಾಶನ ನೀಡಿದರೆ ಅವರ ಆರೋಗ್ಯ, ಶಿಕ್ಷಣ ಜೊತೆಯಲ್ಲಿ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡಿದಂತಾಗುತ್ತದೆ. ಹೀಗಾಗಿ ಈ ಕುರಿತು ಒಂದು ರೂಪುರೇಷೆಯನ್ನು ತಯಾರಿಸಿಮಾದರಿ ಮಾಸಾಶನ ಪದ್ದತಿಯನ್ನು ಆರಂಭಿಸುವ ಕುರಿತು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಯೋಜನೆ ಕಾರ್ಯರೂಪಕ್ಕೆ ತರ್ಯ್ವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.