ಕಾರ್ಕಳ, ಸೆ.16(DaijiworldNews/AA): ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ. ಪಕ್ಷವನ್ನು ಮತ್ತೊಮ್ಮೆ ತಳ ಮಟ್ಟದಿಂದ ಕಟ್ಟ ಬೇಕಾಗಿದೆ ಪ್ರತಿಯೊಬ್ಬ ನಾಯಕರೂ ಕೂಡ ಪಕ್ಷದ ನೆಲೆಯಲ್ಲಿ ಕೆಲಸ ಮಾಡಬೇಕಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ತಿಳಿಸಿದರು.
ಅವರು ಉಸ್ತುವಾರಿಯಾಗಿ ಪ್ರಥಮ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಕ್ಷದ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಮಾಹಿತಿಯನ್ನು ಪಡೆದುಕೊಂಡರು. ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಹಲವು ಮಹತ್ವದ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ಡಿ ಆರ್ ರಾಜು ಸಾಂದರ್ಭಿಕವಾಗಿ ಪಕ್ಷದ ಅಭಿವೃದ್ಧಿ ಹಾಗೂ ಬಲವರ್ಧನೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂದಾಳು ಮುನಿಯಾಲ ಉದಯ ಕುಮಾರ ಶೆಟ್ಟಿ ಮಾತನಾಡಿ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಂಗ್ರೆಸ್ ಮುಖಂಡ ಸುರೇಂದ್ರ ಶೆಟ್ಟಿ, ಹೆಬ್ರಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಹಿರಿಯ ನಾಯಕರಾದ ಪ್ರಭಾಕರ ಬಂಗೇರ ಉಪಸ್ಥಿತರಿದ್ದರು. ಕಾರ್ಕಳ, ಹೆಬ್ರಿ ಬ್ಲಾಕ್ ಹಿರಿಯ ಮುಖಂಡರು ಹಾಗೂ ಪಕ್ಷದ ಪ್ರಮುಖರು ಭಾಗಿಯಾಗಿದ್ದರು. ಕಾಂಗ್ರೆಸ್ ವಕ್ತಾರ ಶುಭದ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.