ಬಂಟ್ವಾಳ, ಸೆ.16(DaijiworldNews/AA): ವಿಶ್ವಕರ್ಮರು ಕುಲಕಸುಬುಗಳ ಮೂಲಕ ಸಮಾಜಕ್ಕೆ ಬೆಳಕಾದವರು. ಸರ್ಕಾರವೂ ಕೂಡ ವಿಶ್ವಕರ್ಮರ ಹೆಸರಿನಲ್ಲಿ ದೊಡ್ಡ ಯೋಜನೆಯನ್ನೇ ಜಾರಿಗೆ ತಂದಿರುವುದು ವಿಶ್ವಕರ್ಮರಿಗೆ ಹೆಮ್ಮೆಯ ಸಂಗತಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.
ಅವರು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ನಡೆದ ವಿಶ್ವಕರ್ಮ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಯವರು ಮಾತನಾಡಿ, ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ವಿಶ್ವಕರ್ಮರ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು.
ಮಂಗಳೂರು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸನ್ನ ಆಚಾರ್ಯ ರವರು ಮಾತನಾಡಿ, ಕಲೆ, ಸಂಸ್ಕೃತಿಯ ಸೃಜನಶೀಲತೆ ವಿಶ್ವಕರ್ಮರಿಗೆ ರಕ್ತಗತವಾಗಿ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚಾಯತ್ ಸಂಘದ ಅಧ್ಯಕ್ಷರಾದ ಸುಧಾಕರ ಆಚಾರ್ಯ ಅವರು, ಮಾಜದ ಹಿರಿಯರ ಶ್ರಮದ ಫಲವಾಗಿ ನಮ್ಮಸಂಘವು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತಾಗಿದೆ ಎಂದು ಹೇಳಿದರು.
ಇಲಾಖೆಯ ಕಿರಿಯ ಇಂಜಿನಿಯರ್ ಕೃಷ್ಣ ಪತ್ತಾರ್ ರವರು ಮಾತನಾಡಿ, ವಿಶ್ವಕರ್ಮರ ಕುಲಕಸುಬು ಇಂದು ಬಂಡವಾಳಶಾಹಿಗಳ ಕೈಯಲ್ಲಿ ಶೋಚನೀಯ ಸ್ಥಿತಿಯಲ್ಲಿದ್ದು, ಎಲ್ಲರೂ ಜಾಗೃತರಾಗಬೇಕಾಗಿದೆ ಎಂದರು.
ಆನೆಗುಂದಿ ಮಹಾ ಸಂಸ್ಥಾನದ ಗುರು ಸೇವಾ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷ ಯುವರಾಜ ಆಚಾರ್ಯರು ಮಾತನಾಡಿ, ಸಂಘದ ಚಟುವಟಿಕೆಗಳಲ್ಲಿ ಯುವ ಸಮುದಾಯ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕೆಂದರು.
ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್ ಆಚಾರ್ಯರವರು ಮಾತನಾಡಿ, ವಿಶ್ವಕರ್ಮ ಸಮಾಜ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದು, ಈ ಮನಸ್ಥಿತಿಯನ್ನು ಬದಲಿಸುವಂತೆ ಕರೆನೀಡಿದರು.
ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ವಿದ್ಯಾರತ್ನಾಕರ ರೈಯವರು ಮಾತನಾಡಿ, ಮಹಿಳಾಮಂಡಳಿಯ ಕ್ರಿಯಾಶೀಲ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಕೋರಿದರು.
ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಕಾಷ್ಠಶಿಲ್ಪಿ ಸಹೋದರರಾದ ಹರೀಶ್ ಆಚಾರ್ಯ ಹಾಗೂ ಕುಮಾರಸ್ವಾಮಿ ಶರ್ಮ ರವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಲಾಯಿತು.
ಧಾರ್ಮಿಕ ಕಾರ್ಯದರ್ಶಿ ಕಳ್ಳಿಗೆ ನಾರಾಯಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸುನಿಲ್ ಆಚಾರ್ಯ ವಂದಿಸಿದರು. ಪದಾಧಿಕಾರಿಗಳಾದ ಜಯಪ್ರಕಾಶ ಆಚಾರ್ಯ, ಜಯಚಂದ್ರ ಆಚಾರ್ಯ, ಅಶೋಕ್ ಆಚಾರ್ಯ ಸಹಕರಿಸಿದರು.