ಸುರತ್ಕಲ್, ಸೆ.16(DaijiworldNews/AA): ಕೃಷ್ಣಾಪುರ ಮುಸ್ಲಿಂ ಜಮಾಅತ್ ಗೆ ಒಳಪಡುವ ಕಾಟಿಪಳ್ಳ 3ನೇ ಬ್ಲಾಕ್ ನ ಮಸ್ಜಿದುಲ್ ಹುದಾ ಜುಮಾ ಮಸೀದಿಗೆ ಕಲ್ಲೆಸೆದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್ ಶೆಟ್ಟಿ(26), ಕಟ್ಲ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ ಶಿವಾನಂದ ಛಲವಾದಿ(19), ಹಳೆಯಂಗಡಿ ಚೇಳಾಯರು ಖಂಡಿಗೆ ಪಾಡಿ ನಿವಾಸಿ ನಿತಿನ್ ಹಡಪ(22), ಮುಂಚೂರು ನಿವಾಸಿ ಸುಜಿತ್ ಶೆಟ್ಟಿ(23), ಈಶ್ವರ ನಗರ ನಿವಾಸಿ ಮನು ಯಾನೆ ಅಣ್ಣಪ್ಪ(24) ಮತ್ತು ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಪ್ರೀತಂ ಶೆಟ್ಟಿ(34) ಎಂದು ತಿಳಿದು ಬಂದಿದೆ.
ಆರೋಪಿಗಳ ಪೈಕಿ ಭರತ್ ಎಂಬಾತನ ವಿರುದ್ಧ ತಿಂಗಳುಗಳ ಹಿಂದಷ್ಟೇ ಹೊಡೆದಾಟದ ಪ್ರಕರಣವೊಂದರಲ್ಲಿ 307 ಪ್ರಕರಣ ದಾಖಲಾಗಿದ್ದು, ಆತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು.
ಕಳೆದ ರಾತ್ರಿ ಆರೋಪಿಗಳು ಜನತಾ ಕಾಲನಿ ಸ್ಮಶಾನದ ಕಡೆಯಿಂದ ಎರಡು ಬೈಕ್ ಗಳಲ್ಲಿ ಬಂದು, ಮಸೀದಿಯ ಹಿಂಭಾಗದ ಕಿಟಕಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಬಳಿಕ ಒಂದು ಬೈಕ್ ನಲ್ಲಿದ್ದ ಮೂವರು ಗಣೇಶ ಕಟ್ಟೆಯ ಕಡೆ ತೆರಳಿದ್ದರೆ, ಇನ್ನೊಂದು ಬೈಕ್ ನಲ್ಲಿದ್ದ ಇಬ್ಬರು ಬೈಕ್ ತಿರುಗಿಸಿಕೊಂಡು ವಾಪಾಸ್ ಸ್ಮಶಾನದ ಕಡೆಗೆ ಪರಾರಿಯಾಗಿದ್ದರು.