ಪುತ್ತೂರು, ಸೆ.15(DaijiworldNews/AA): ಹೆಲ್ಮೆಟ್ ಧರಿಸದಿದ್ದಕ್ಕಾಗಿ ಉಪ್ಪಿನಂಗಡಿಯ ಆಟೋರಿಕ್ಷಾ ಚಾಲಕನಿಗೆ ದಂಡ ವಿಧಿಸಿ ಮೈಸೂರಿನ ತಲಕಾಡು ಪೊಲೀಸರು ನೋಟಿಸ್ ನೀಡಿದ್ದಾರೆ.
ಉಪ್ಪಿನಂಗಡಿಯಲ್ಲಿ ಆಟೋ ಚಲಾಯಿಸುವ ರೋಹಿತ್ ಎಂಬುವವರಿಗೆ ಸೆಪ್ಟೆಂಬರ್ 12ರಂದು ಮಧ್ಯಾಹ್ನ 3.18 ಗಂಟೆಗೆ ಮೈಸೂರು ರಸ್ತೆಯ ತಲಕಾಡು ಜಂಕ್ಷನ್ನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರಿ ಮಾಡಿದ್ದರಿಂದ ಮೋಟಾರು ವಾಹನ ಕಾಯಿದೆಯ ಸಂಚಾರಿ ನಿಯಮದಡಿ 500 ರೂಪಾಯಿ ದಂಡ ಪಾವತಿಸಿ ಎಂದು ಸಂದೇಶ ಬಂದಿದೆ. ಪೊಲೀಸರು ದಂಡ ವಿಧಿಸಿರುವ ಕೆಎ 21 ಬಿ 3862 ಎಂಬ ಹೆಸರಿನ ವಾಹನವು ಆಟೋವಾಗಿದೆ. ಆದರೆ ಪೊಲೀಸರು ದ್ವಿಚಕ್ರ ವಾಹನವೆಂದು ದಂಡ ವಿಧಿಸಲಾಗಿದೆ.
ಉಪ್ಪಿನಂಗಡಿಯ ಪೆರಿಯಡ್ಕ ನಿವಾಸಿ ರೋಹಿತ್ ಅವರು ಸೆಪ್ಟೆಂಬರ್ 12ರಂದು ತನ್ನ ಆಟೋ ಉಪ್ಪಿನಂಗಡಿಯಲ್ಲೇ ಇತ್ತು. ಹಾಗೂ ತನಗೆ ಯಾವುದೇ ಸ್ವಂತ ದ್ವಿಚಕ್ರ ವಾಹನವಿಲ್ಲ ಎಂದು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೆ ನಿಯಮ ಉಲ್ಲಂಘಿಸಿರುವುದರಿಂದ ದಂಡ ವಿಧಿಸುವಂತೆ ರೋಹಿತ್ ಅವರಿಗೆ ಸಂದೇಶ ಬಂದಿದೆ. ಹೀಗಾಗಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಸಂದೇಶ ಕಳುಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಸಿ.ಸಿ.ಕ್ಯಾಮರಾದಲ್ಲಿ ನಂಬರ್ ತಪ್ಪಾಗಿ ದಾಖಲಾಗುವ ಸಾಧ್ಯವಿಲ್ಲ. ಜೊತೆಗೆ ಸಿ.ಸಿ.ಕ್ಯಾಮೆರಾ ಆಧರಿಸಿ ಯಾವುದೇ ದಂಡದ ಮೆಸೇಜ್ಗಳು ತಕ್ಷಣವೇ ಬರುವುದಿಲ್ಲ.
ರೋಹಿತ್ ಅವರು ಈ ಸಂದೇಶ ನೋಡಿ ಕಂಗಾಲಾಗಿದ್ದು, ತಕ್ಷಣವೇ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನೋಟಿಸ್ ಬಾರದೆ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದಾರೆ. ಬಳಿಕ ರೋಹಿತ್ ಮೈಸೂರಿನ ತಲಕಾಡು ಪೊಲೀಸ್ ಠಾಣೆಯ ನಂಬರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಲಕಾಡು ಪೊಲೀಸರು ನಮ್ಮಲ್ಲಿ ಸಿ.ಸಿ. ಕ್ಯಾಮೆರಾದ ಮೂಲಕ ವಾಹನಗಳಿಗೆ ದಂಡ ಹಾಕುವ ವ್ಯವಸ್ಥೆಯಿಲ್ಲ ಎಂದು ಹೆಳಿದ್ದಾರೆ. ಇದರಿಂದ ಈ ಸಂದೇಶ ವಂಚನೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.