ಉಡುಪಿ, ಸೆ.15 (DaijiworldNews/TA):ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಮೀಸಲು ಅರಣ್ಯದ ಅಂಚಿನಲ್ಲಿರುವ ಬೆಟ್ಟು ಶೇಡಿಕಾಂತ ಪ್ರದೇಶದ ನೆಲ್ಲಿಕಟ್ಟೆ ದೇವಸ್ಥಾನದ ಬಳಿ ಆನೆಗಳ ಹಾವಳಿ ಮತ್ತೆ ಕಾಣಿಸಿಕೊಂಡಿದೆ.
ನೆಲ್ಲಿಕಟ್ಟೆಯಿಂದ ಮೇಗದ್ದೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಡಾನೆಯೊಂದು ದೊಡ್ಡ ಮರವನ್ನು ಬುಡ ಸಮೇತ ಕಿತ್ತು ಹಾಕಿದೆ. ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಸ್ಥಳೀಯ ನಿವಾಸಿಗಳೊಂದಿಗೆ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸದ್ಯ ಹೆಬ್ರಿಯಿಂದ ನೆಲ್ಲಿಕಟ್ಟೆಗೆ ಮಾತ್ರ ಬಸ್ ಸೇವೆ ಲಭ್ಯವಿದ್ದು, ನೆಲ್ಲಿಕಟ್ಟೆಯಿಂದ ಮೇಗದ್ದೆಗೆ ತೆರಳುವವರು ಐದು ಕಿಲೋಮೀಟರ್ ನಡೆದುಕೊಂಡು ಹೋಗಬೇಕು. ಅರಣ್ಯ ಇಲಾಖೆಯು ಶಾಲಾ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದರೂ, ಪದೇ ಪದೇ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಈ ಭಾಗದಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.
ಅರಣ್ಯಾಧಿಕಾರಿ ಚಿದಾನಂದಪ್ಪ ಮಾತನಾಡಿ, "ಅರಣ್ಯ ವಲಯದಲ್ಲಿ ಆನೆ ಓಡಾಡುತ್ತಿದ್ದು, ಖಾಸಗಿ ಕೃಷಿ ಭೂಮಿಗೆ ಇತ್ತೀಚೆಗೆ ಯಾವುದೇ ಹಾನಿಯಾಗಿಲ್ಲ. ನಾವು ಅದರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಅಗತ್ಯವಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ". ಎಂದು ಹೇಳಿದ್ದಾರೆ.