ಉಡುಪಿ, ಸೆ.14(DaijiworldNews/AA): ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದು ವರ್ಷದಲ್ಲಿ 4 ಮಂದಿ ಎಸ್ಐಗಳು ಸಹಿತ 80ಕ್ಕೂ ಅಧಿಕ ಸಿಬ್ಬಂದಿಯನ್ನು ಅಮಾನತುಮಾಡಲಾಗಿದೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪೊಲೀಸರು ಅಮಾನತುಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ. ಅವರು ಪೊಲೀಸರ ಕರ್ತವ್ಯದ ಬಗ್ಗೆ ಗಮನಹರಿಸುತ್ತಿದ್ದು, ಒಂದು ವರ್ಷದಿಂದಲೂ ವಿವಿಧ ಕಾರಣಗಳಿಂದ ಕರ್ತವ್ಯಲೋಪ ಎಸಗಿದವರಿಗೆ ಅಮಾನತು ಹಾಗೂ ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್ಐಗಳ ಪೈಕಿ ಕೆಲವರ ಅಮಾನತು ಆದೇಶ ಮುಗಿದಿದೆ. ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅಕ್ರಮ ಮರಳು ಸಾಗಾಟಗಾರರೊಂದಿಗೆ ಶಾಮೀಲಾಗಿರುವುದು, ಲಂಚ ಪಡೆದಿರುವುದು, ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ ಎಸ್ಐಗಳನ್ನ ಅಮಾನತು ಮಾಡಲಾಗಿದೆ.
ಇದು ಹಂತಹಂತವಾಗಿ ನಡೆಯುವ ಪ್ರಕ್ರಿಯೆ. ಕರ್ತವ್ಯ ಲೋಪವೆಸಗಿದ ಕೆಲವರನ್ನು ಅಮಾನತು ಮಾಡಲಾಗಿದೆ. ಇಲಾಖೆಯನ್ನು ಬಲಪಡಿಸಲು ಮತ್ತು ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಆದ್ಯತೆ ನೀಡಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಸ್ ಪಿ ಡಾ.ಅರುಣ್ ಕೆ ಅಭಿಪ್ರಾಯಪಟ್ಟರು.